“ಭ್ರಷ್ಟಾಚಾರ ಆರೋಪ ಬಂದಾಗ ನಾವು ಭ್ರಷ್ಟರಲ್ಲ ಎಂದು ಯಾರೂ ಹೇಳುತ್ತಿಲ್ಲ. ಬದಲಾಗಿ ಅವರು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆಂದು ಬೇರೆಯವರ ಮೇಲೆ ಗೂಬೆ ಕೂರಿಸುವ ರಾಜಕಾರಣಿಗಳೇ ತುಂಬಿ ಹೋಗಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಶುಕ್ರವಾರ ಎರಡು ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಸಂಬಂಧಪಟ್ಟ ಜಾಗಗಳ ಮೇಲೆ ಐಟಿ ದಾಳಿ ನಡೆದಿದೆ. ಪ್ರತಿಯೊಂದು ಕಾಮಗಾರಿಯಲ್ಲೂ 40-50 ಪರ್ಸೆಂಟ್ ಕಮಿಷನ್ ತೆಗೆದುಕೊಂಡರೆ ಉತ್ತಮ ಗುಣಮಟ್ಟದ ಕೆಲಸಗಳನ್ನು ಹೇಗೆ ಮಾಡಲು ಸಾಧ್ಯ? ಉದ್ಘಾಟನೆಗೊಂಡ ಮೂರು ದಿನದಲ್ಲೇ ರಸ್ತೆಗಳು ಗುಂಡಿ ಬೀಳುತ್ತವೆ. ಚರಂಡಿಗಳು ಬಾಯ್ಬಿಟ್ಟುಕೊಳ್ಳುತ್ತವೆ” ಎಂದು ಕಿಡಿಕಾರಿದರು.
“ಶಿಕ್ಷಣ ಕ್ರಾಂತಿ, ಆರೋಗ್ಯ ಕ್ರಾಂತಿಗಳು ದೆಹಲಿ, ಪಂಜಾಬ್‌ನಲ್ಲಿ ಆಗಿವೆ. ಆದರೆ ಇಲ್ಲಿ ಯಾಕೆ ಆಗುತ್ತಿಲ್ಲ? ಇಲ್ಲಿನ ಶೇ.60 ರಷ್ಟು ಶಾಸಕರು, ಸಂಸದರು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಮಾಲೀಕರಾಗಿದ್ದಾರೆ. ನೂರಾರು ಕೋಟಿ ಒಡೆಯರೇ ಇವತ್ತು ಶಾಸಕ, ಸಂಸದರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಹೀಗಿರುವಾಗ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳು ಬಡವರ ಹಾಗೂ ಮಧ್ಯಮ ವರ್ಗದವರ ಕೈಗೆಟುಕುವುದು ಹೇಗೆ?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಎಂಟಿಸಿ ಬಸ್ ಹರಿದು ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
ರಾಯಚೂರಿನಲ್ಲಿ ಏಮ್ಸ್ ಹೋರಾಟಕ್ಕೆ ಎಎಪಿ ಬೆಂಬಲ
“ರಾಜ್ಯಕ್ಕೆ ಹತ್ತಿ, ಚಿನ್ನ, ವಿದ್ಯುತ್, ಆಹಾರ ಎಲ್ಲವನ್ನೂ ಕೊಡುತ್ತಿರುವ ರಾಯಚೂರು ಜಿಲ್ಲೆ ಇಂದಿಗೂ ಹಿಂದುಳಿದ ಜಿಲ್ಲೆಯಾಗಿ ಉಳಿದಿರುವುದು ದುಃಖಕರವಾಗಿದೆ. ಬಸವರಾಜ್ ಕಳಸ ನೇತೃತ್ವದಲ್ಲಿ 500 ದಿನಗಳಿಂದ ಏಮ್ಸ್ ಗಾಗಿ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಗಮನಹರಿಸದಿರುವುದು ದುರಂತ. ರಾಯಚೂರಲ್ಲಿ ಏಮ್ಸ್ ನಿರ್ಮಾಣಕ್ಕೆ ಎಲ್ಲ ರೀತಿಯ ಘೋಷಣೆಗಳಾದರೂ ಕೂಡ ರಾಜಕಾರಣಿಗಳ ಒತ್ತಡದಿಂದ ಇದುವರೆಗೆ ಸಾಧ್ಯವಾಗಿಲ್ಲ. ಈ ಹೋರಾಟವನ್ನು ಎಎಪಿ ಬೆಂಬಲಿಸುತ್ತದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಲೇಬೇಕು” ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.