ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೊಸ ಕ್ರಮ ಕೈಗೊಂಡಿದೆ. ಮೊದಲ ಬಾರಿ ಸಿಗ್ನಲ್ ಜಂಪ್ ಮಾಡಿದರೆ ₹3,000 ಫೈನ್, ಎರಡನೇ ಬಾರಿಗೆ ₹5,000 ದಂಡ ವಿಧಿಸುವ ನಿರ್ಧಾರವನ್ನು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ನಿರಂತರವಾಗಿ ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ.
ಸಂಚಾರಿ ಪೊಲೀಸ್ ಮೂಲಗಳ ಪ್ರಕಾರ, ಸಿಗ್ನಲ್ ಜಂಪ್ ಮಾಡುವುದು ನಗರದಲ್ಲಿ ಅತ್ಯಂತ ಸಾಮಾನ್ಯವಾದ ನಿಯಮ ಉಲ್ಲಂಘನೆಗಳಲ್ಲಿ ಒಂದಾಗಿದೆ. ಇದರಿಂದಾಗಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ ಮತ್ತು ಸಾಮಾನ್ಯ ಜನರ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಆದ್ದರಿಂದ ಕ್ಯಾಮೆರಾ ಮೂಲಕ ಮತ್ತು ಸ್ಥಳದಲ್ಲೇ ಪತ್ತೆಹಚ್ಚಿ ದಂಡ ವಿಧಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಜೊತೆಗೆ ವಿವಿಧ ಸಂಚಾರಿ ಉಲ್ಲಂಘನೆಗಳಿಗೆ ಅಂಕಗಳನ್ನು ನಿಗದಿಪಡಿಸಿ ನಿರ್ದಿಷ್ಟ ಮಿತಿ ತಲುಪಿದಾಗ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಅಂಕಾಧಾರಿತ (ಪಾಯಿಂಟ್ ಬೇಸ್ಡ್) ವ್ಯವಸ್ಥೆ ಜಾರಿಗೆ ತರುವುದು ಮತ್ತು ಅದಕ್ಕೆ ಅಗತ್ಯವಿರುವ ಕಾನೂನು ಕ್ರಮಗಳ ಪರಿಶೀಲನೆ ಸೇರಿವೆ.
ಸಾರಿಗೆ ಇಲಾಖೆಯ ಸಾರಥಿ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರ ಇ-ಚಲನ್ ವ್ಯವಸ್ಥೆಯೊಂದಿಗೆ ನೇರವಾಗಿ ಜೋಡಿಸಿ ಪರವಾನಗಿ ಅಮಾನತು ಹಾಗೂ ಉಲ್ಲಂಘನೆಗಳ ಮಾಹಿತಿಯನ್ನು ಸಮಗ್ರವಾಗಿ ನಿರ್ವಹಿಸುವುದು, ಸಾರ್ವಜನಿಕ ಸುರಕ್ಷತೆಗೆ ತೊಂದರೆ ಉಂಟುಮಾಡುವ ಉಲ್ಲಂಘನೆಗಳಿಗೆ (ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ/ಚಾಲನೆ, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕು, ಸಂಚಾರ ಸಂಕೇತ ಉಲ್ಲಂಘನೆ ಮುಂತಾದವು) ದಂಡದ ಮೊತ್ತವನ್ನು ಹೆಚ್ಚಿಸುವುದು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚು ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಸೂಚಿಸಿದೆ.
ಶಬ್ದ ಮಾಲಿನ್ಯ ಮತ್ತು ರಸ್ತೆ ಸುರಕ್ಷತೆಗೆ ಕಾರಣವಾಗುವ ಅನಧಿಕೃತ ಹಾರ್ನ್‌ಗಳು, ಮಾರ್ಪಡಿಸಿದ ಸೈಲೆನ್ಸರ್‌ಗಳು ಹಾಗೂ ಎಲ್‌ಇಡಿ ಹೆಡ್‌ಲೈಟ್‌ಗಳ ಮಾರಾಟ ಮತ್ತು ಬಳಕೆ ನಿರ್ಬಂಧಿಸುವ ಕ್ರಮಕ್ಕೆ ಇಲಾಖೆ ಮುಂದಾಗಿದ್ದು, ಅರೆ-ಹೆಲ್ಮೆಟ್‌ಗಳ ಉತ್ಪಾದನೆಗೂ ಕಡಿವಾಣ ಬೀಳಲಿದೆ.
ಅಧಿಕಾರಿಗಳು ಹೇಳುವಂತೆ, “ನಿಯಮಗಳನ್ನು ಪಾಲಿಸದವರಿಗೆ ಈಗಿನಿಂದ ಕಠಿಣ ಕ್ರಮ ಜಾರಿಗೊಳಿಸಲಾಗುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗೆ ₹3 ಸಾವಿರ ಮತ್ತು ಮರುಕಳಿಸಿದರೆ ₹5 ಸಾವಿರ ದಂಡ ಕೇವಲ ದಂಡವಲ್ಲದೇ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕ್ರಮ”.
ವಾಹನ ಸವಾರರು ಸಿಗ್ನಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಯಾರಾದರೂ ದಂಡ ವಿಧಿಸಲ್ಪಟ್ಟರೆ, ಆನ್‌ಲೈನ್ ಅಥವಾ ಸಂಬಂಧಪಟ್ಟ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪಾವತಿಸಬಹುದು.
This video cannot be played in your browser. Open the video directly
ನೆನಪಿಡಿ: ಸಂಚಾರಿ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಸಿಗ್ನಲ್ ಜಂಪ್ ಮಾಡದೆಯೇ ಸುರಕ್ಷಿತವಾಗಿ ಪ್ರಯಾಣಿಸಿ!





