ಶಿರಸಿ: ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಹಾಗೂ ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಉದ್ದೇಶದಿಂದ ಪ್ರಶಾಂತಿ ಫೌಂಡೇಶನ್ ವತಿಯಿಂದ ಅಕ್ಟೊಬರ್ 2ರಂದು ಅಂದರೆ ನಾಳೆ ಶಿರಸಿಯಲ್ಲಿ ‘ಮನಸಿರಿ’ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ.
ಅಭಿಯಾನದ ಅಂಗವಾಗಿ ಬೆಳಗ್ಗೆ 9.30ರಿಂದ 11.15ರವರೆಗೆ ಜಾಗೃತಿ ವಾಕಥಾನ್ ನಡೆಯಲಿದೆ. ಶಿರಸಿ ಹಳೆ ಬಸ್ ನಿಲ್ದಾಣದಿಂದ ಆರಂಭವಾಗುವ ವಾಕಥಾನ್ ದೇವಿಕೆರೆ ಮೂಲಕ ಕಡವೆ ಶ್ರೀ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದವರೆಗೆ ಸಾಗಲಿದೆ.
ನಂತರ ಬೆಳಗ್ಗೆ 11.15ರಿಂದ ಮಧ್ಯಾಹ್ನ 1ರವರೆಗೆ ಕಡವೆ ಶ್ರೀ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಾನಸಿಕ ಆರೋಗ್ಯದ ಕುರಿತು ಸಂವಾದ, ಜಾಗೃತಿ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಾರವಾರ | 80 ಪ್ರಕರಣಗಳ ಪೈಕಿ 63ಕ್ಕೆ ಒಂದೇ ದಿನದಲ್ಲಿ ಪರಿಹಾರ
ತಿಳಿದುಕೊಳ್ಳೋಣ–ಅರ್ಥಮಾಡಿಕೊಳ್ಳೋಣ–ಸ್ವೀಕರಿಸೋಣ–ಒಳಗೊಳ್ಳೋಣ’ ಎಂಬ ಸಂದೇಶದೊಂದಿಗೆ ನಡೆಯುವ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ವೃತ್ತಿಪರರು, ಸರ್ಕಾರಿ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಮುದಾಯದ ಗುಂಪುಗಳು, ಕುಟುಂಬಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸುವುದು, ಈ ವಿಚಾರಕ್ಕೆ ಸಂಬಂಧಿಸಿದ ಕಳಂಕ ಮತ್ತು ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡುವುದು ಹಾಗೂ ಎಲ್ಲರನ್ನೂ ಒಳಗೊಂಡ ಕಾಳಜಿಯ ಸಮುದಾಯ ನಿರ್ಮಿಸುವುದು ಅಭಿಯಾನದ ಉದ್ದೇಶವಾಗಿದೆ.
ಪರಿಸರ ಸ್ನೇಹಿ ಬಟ್ಟೆಯ ಬ್ಯಾನರ್‌ಗಳ ಮೂಲಕ ಜಾಗೃತಿ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಪ್ರಶಾಂತಿ ಫೌಂಡೇಶನ್ ತಿಳಿಸಿದೆ. 2005ರಲ್ಲಿ ಸ್ಥಾಪನೆಯಾದ ಪ್ರಶಾಂತಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ಮಾನಸಿಕ ಆರೋಗ್ಯ, ವಿಕಲಚೇತನರ ಪುನರ್ವಸತಿ, ಆರಂಭಿಕ ಹಸ್ತಕ್ಷೇಪ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.




