ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಭಾನುವಾರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಾಟೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 17 ವರ್ಷದ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತನನ್ನು ಸಿಂಹಾದ್ರಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ಸಮುದಾಯದ ಮಾರುತೇಶ್ ಎಂಬಾತನನ್ನು ಮಿಡಿಗೇಶಿ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಸಾಪುರ ಗ್ರಾಮದಲ್ಲಿ ನಾಯಕ ಹಾಗೂ ಒಕ್ಕಲಿಗ ಸಮುದಾಯದ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಿಂಹಾದ್ರಿ ಮೆರವಣಿಗೆಯಲ್ಲಿ ಕುಣಿಯಲು ತೆರಳಿದ್ದಾಗ ಮಾರುತೇಶ್ ಆತನೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ ಎಂದು ಮೃತನ ತಾಯಿ ಅನ್ನಪೂರ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಮಾರುತೇಶ್ ಏರು ಧ್ವನಿಯಲ್ಲಿ ಬೈದು ಸಿಂಹಾದ್ರಿಯ ಕಪಾಳಕ್ಕೆ ಕೈಯಿಂದ ಹೊಡೆದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಆತನ ಎದೆಗೆ ಗುದ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಸಿಂಹಾದ್ರಿ ಸ್ಥಳದಲ್ಲೇ ಅಸ್ವಸ್ಥಗೊಂಡು ನೆಲಕ್ಕೆ ಬಿದ್ದಿದ್ದಾನೆ. ತಕ್ಷಣ ಸ್ಥಳದಲ್ಲಿದ್ದವರು ಆತನನ್ನು ಮಧುಗಿರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದು, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಕುರಿತು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




