ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಘೋಷಿಸಿರುವ ₹5,300 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಕುರಿತು ಸಂಸದರು ಸಂಸತ್ತಿನಲ್ಲಿ ಪ್ರಬಲವಾಗಿ ಧ್ವನಿ ಎತ್ತುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಒತ್ತಾಯಿಸಿದರು.
ಶಿರಾ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ನಡೆಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ ಹಾಗೂ ಪಾವಗಡ ಸೇರಿದಂತೆ ಮಳೆ ಆಶ್ರಿತ ಪ್ರದೇಶಗಳ ರೈತರ ಬದುಕು ಹಸನಾಗಲು ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಹೇಮಾವತಿ ಯೋಜನೆಯಡಿ ನೀರು ಹಂಚಿಕೆಯಾಗದ ಗ್ರಾಮಗಳು ಹಾಗೂ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ತಮ್ಮೂರಿಗೆ ನೀರು ಬರುತ್ತದೆ ಎಂಬ ಭರವಸೆಯಿಂದ ಅನೇಕ ರೈತರು ಯೋಜನೆಗಾಗಿ ಜಮೀನುಗಳನ್ನು ಬಿಟ್ಟುಕೊಟ್ಟು, ಪರಿಹಾರ ದೊರೆಯದಿದ್ದರೂ ಕಾಮಗಾರಿಗೆ ಸಹಕರಿಸಿದ್ದಾರೆ. ಅಂತಹ ರೈತರಿಗೆ ಬಾಕಿ ಇರುವ ಪರಿಹಾರವನ್ನು ತಕ್ಷಣ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರೈತರ ಪರವಾದ ನಿಲುವು ಹೊಂದಿದ್ದು, ಈ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕಳ್ಳಂಬೆಳ್ಳ ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ಮಾತನಾಡಿ, ಮಳೆ ಆಶ್ರಿತ ಪ್ರದೇಶಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜತೆಗೆ ರೈತರ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಈ ಯೋಜನೆ ರೈತರ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಕಾಮಗಾರಿ ವಿಳಂಬದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಹೇಮಾವತಿ ಯೋಜನೆಯಡಿ ಯಾವ ಯಾವ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ಆ ಯೋಜನೆಯಡಿ ನೀರು ಸಿಗದ ಉಳಿದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಎಚ್. ಲಿಂಗಪ್ಪ, ಚಂದ್ರಶೇಖರ್, ನೇರಳಗುಡ್ಡ ಶಿವಕುಮಾರ್, ಎಂ.ಆರ್. ಶಶಿಧರ ಗೌಡ, ಸೂಡ ಮಾಜಿ ಅಧ್ಯಕ್ಷ ಗುಳಿಗೆನಹಳ್ಳಿ ನಾಗರಾಜು, ಮುಕುಂದಪ್ಪ, ಷಣ್ಮುಖಪ್ಪ, ಮುದ್ದು ರಂಗೇಗೌಡ, ಕಾಲೇಜಿನ ರಂಗನಾಥ್, ಎಸ್.ಎಲ್. ಗೋವಿಂದರಾಜು, ಎಚ್. ಗುರುಮೂರ್ತಿ ಗೌಡ, ಜಯರಾಮಯ್ಯ, ಪುಟ್ಟ ಕಾಮಣ್ಣ, ಶೇಷ ನಾಯ್ಕ, ಹೊಸಪಾಳ್ಯ ಸತ್ಯನಾರಾಯಣ, ಜಯಪ್ರಕಾಶ್, ಬುಕ್ಕಾಪಟ್ಟಣ ಶಿವಕುಮಾರ್ ಸೇರಿದಂತೆ ಸಾವಿರಾರು ರೈತರು ಹಾಗೂ ಮುಖಂಡರು ಭಾಗವಹಿಸಿದ್ದರು.




