ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ ಬಾಯಲ್ಲಿ ಕೇಳಿಬರುತ್ತಿದೆ. ಮೂರನೇ ವರ್ಷಕ್ಕೆ ಕಾಲಿಟ್ಟಿರುವ ತುಮಕೂರು ದಸರಾ ಮಹೋತ್ಸವ ನಾಳೆ (ಅ.11) ಚಾಲನೆ ಪಡೆದು, ಅ.21ರಂದು ಸಮಾರೋಪಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಪದವಿಪೂರ್ವ ಕಾಲೇಜು ಆವರಣದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, “ದಸರಾ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಜನರ ಹಬ್ಬವಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಉತ್ಸವ ಆಚರಿಸಬೇಕೇ ಎಂಬ ಚರ್ಚೆ ನಡೆದಿತ್ತು. ಆದರೆ ಸಂಸ್ಕೃತಿ-ಸಂಪ್ರದಾಯ ಮರೆಯಬಾರದೆಂಬ ಸಾರ್ವಜನಿಕರ ಅಭಿಪ್ರಾಯದಂತೆ, ಅನಗತ್ಯ ವೆಚ್ಚಕ್ಕೆ ಅವಕಾಶ ನೀಡದೆ ಇತಿಮಿತಿಯೊಳಗೆ ಉತ್ಸವ ನಡೆಸಲಾಗುತ್ತಿದೆ.
ಅ.11ರ ಬೆಳಗ್ಗೆ 8.30ಕ್ಕೆ ಸಿದ್ಧಗಂಗಾ ಶ್ರೀಗಳು, ಹನುಮಂತನಾಥ ಸ್ವಾಮೀಜಿ ಸೇರಿದಂತೆ ಮಠಾಧೀಶರ ಸಾನ್ನಿಧ್ಯದಲ್ಲಿ ದಸರಾ ಧ್ವಜ ಮತ್ತು ನಾಡಧ್ವಜಾರೋಹಣದೊಂದಿಗೆ ಚಾಲನೆ ದೊರೆಯಲಿದೆ. ನಂತರ ಚಾಮುಂಡೇಶ್ವರಿ, ದುರ್ಗಾದೇವಿ ಪೂಜೆ, ಹೋಮ-ಹವನ ನಡೆಯಲಿವೆ. ಬಳಿಕ ವಸ್ತುಪ್ರದರ್ಶನ ಆರಂಭವಾಗಲಿದ್ದು, ಇಸ್ರೋ ಉಪಗ್ರಹ ತಂತ್ರಜ್ಞಾನ ಹಾಗೂ ಎಚ್‌ಎಎಲ್ ಹೆಲಿಕಾಪ್ಟರ್ ರಚನೆ ಕುರಿತು ಮಕ್ಕಳು ಮತ್ತು ಯುವಜನರಿಗೆ ಮಾಹಿತಿ ನೀಡಲಿವೆ

ಪ್ರಮುಖ ಆಕರ್ಷಣೆ :
ಫಲಪುಷ್ಪ ಪ್ರದರ್ಶನ : ಹೂವುಗಳಲ್ಲಿ ಇಂಡಿಯಾ ಗೇಟ್, 1914ರ ತುಮಕೂರು ಟೌನ್‌ಹಾಲ್, ಹಂಪಿ ಕಲ್ಲಿನ ರಥದ ಮಾದರಿ. ಜೊತೆಗೆ ತುಮಕೂರಿಗೆ ಮೆಟ್ರೋ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪರಿಕಲ್ಪನೆ.
ಹೆಲಿಕಾಪ್ಟರ್ ರೈಡ್ : ಕಳೆದ ವರ್ಷ ಜನಮೆಚ್ಚುಗೆ ಗಳಿಸಿದ್ದ ಸೌಲಭ್ಯ ಅ.11ರಿಂದ ಮತ್ತೆ ಲಭ್ಯ.
ರಂಗ ದಸರಾ : ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಪ್ರತಿದಿನ ಎರಡು ನಾಟಕ ಪ್ರದರ್ಶನ.
ಅಮಾನಿಕೆರೆ ಸಂಗೀತ ಕಾರಂಜಿ : ಶಾಶ್ವತ ಕಾರಂಜಿ ವಾರಾಂತ್ಯದಲ್ಲೂ ವೀಕ್ಷಣೆಗೆ ಲಭ್ಯ.
ಉಚಿತ ಅಂಬಾರಿ ಬಸ್ : ದೀಪಾಲಂಕಾರ ವೀಕ್ಷಣೆಗೆ ಈ ಬಾರಿ ಎರಡು ಬಸ್‌ಗಳು (ಕಳೆದ ವರ್ಷ ಒಂದು).
ದಿನದಿಂದ ದಿನಕ್ಕೆ ಕಾರ್ಯಕ್ರಮಗಳು
-ಅ.11: ಸಂಜೆ ‘ಶಿವಲೀಲಾ’ ನಾಟಕ; ರಾತ್ರಿ 8ಕ್ಕೆ ‘ಕ್ರಿಪ್ಟೋಸ್’ ಸಂಗೀತ.
ಅ.12: ‘ಟು ಐಡ್ ವಿಜಾರ್ಡ್’ ತಂಡ.
ಅ.14: ‘ಆಲ್ ಓಕೆ’ ತಂಡ.
ಅ.15: ಮಕ್ಕಳ ದಸರಾ.
ಅ.16: ‘ಸೌತ್ ಮೀಲ್’ ತಂಡ.
ಅ.17: ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ, ಕವಿಗೋಷ್ಠಿ, ಸಂಜೆ ದಾಂಡಿಯಾ ನೃತ್ಯ.
– ಅ.18: ವಿದ್ಯಾರ್ಥಿಗಳ ಪಂಜಿನ ಕವಾಯತು, ಎಂ.ಜಿ. ಸ್ಟೇಡಿಯಂನಲ್ಲಿ ‘ಸೌತ್ ಗರಾಜ್’ ಬ್ಯಾಂಡ್, ಪೂಜಾ ರಂಜಿತ್ ತಂಡದ ನೃತ್ಯ, ಕಾರು ರ್ಯಾಲಿ.
– ಅ.19: ನಟಿ ರಚಿತಾ ರಾಮ್ ಮುಖ್ಯ ಅತಿಥಿ; ಚಂದನ್ ಶೆಟ್ಟಿ ಅವರಿಂದ ಎರಡು ಗಂಟೆಗಳ ಕಾರ್ಯಕ್ರಮ.
– ಅ.20: ಬೆಳಗ್ಗೆ ಕುಸ್ತಿ, ದಸರಾ ಕ್ರೀಡಾಕೂಟ; ಸಂಜೆ ರಮೇಶ್ ಅರವಿಂದ್ ಭಾಗಿ, ಸಂಚಿತ್ ಹೆಗ್ಡೆ ಸಂಗೀತ, ಪ್ರಭಾತ್ ಕಲಾವಿದರ ‘ಕನ್ನಡದ ಗತವೈಭವ’ ನಾಟಕ.
ಅ.21: ಜಂಬೂ ಸವಾರಿಯ ಸೊಬಗು
ಸಮಾರೋಪ ದಿನ ಮಧ್ಯಾಹ್ನ 1ರ ಸುಮಾರಿಗೆ ಟೌನ್‌ಹಾಲ್ ಸರ್ಕಲ್‌ನಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಈ ಬಾರಿ 3 ಆನೆಗಳು, 70 ಗ್ರಾಮದೇವತೆಗಳು ಹಾಗೂ 33 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ನಂತರ ಶಮಿ ಪೂಜೆ, ಸಂಜೆ ಹರಿಕೃಷ್ಣ ತಂಡದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹತ್ತೂ ದಿನ ದೇವತಾ ಪೂಜೆ ಹಾಗೂ ಆಹಾರ ಮೇಳ ಇರಲಿದೆ.
ಇಂದು ರಾತ್ರಿಯೇ ಕೆಲ ಉದ್ಘಾಟನೆ
ಅ.11ರಂದು ಮೈಸೂರು ದಸರಾ ಹಾಗೂ ದಸರಾ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಬೇಕಿರುವುದರಿಂದ, ಅಮಾನಿಕೆರೆ ಸಂಗೀತ ಕಾರಂಜಿ, ಅಂಬಾರಿ ಬಸ್ ಹಾಗೂ ದೀಪಾಲಂಕಾರದ ಕೆಲ ಉದ್ಘಾಟನೆಗಳನ್ನು ಇಂದು ರಾತ್ರಿಯೇ ನಡೆಸಲು ಉದ್ದೇಶಿಸಲಾಗಿದೆ ಎಂದು ಪರಮೇಶ್ವರ ತಿಳಿಸಿದರು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಶಾಸಕ ಜ್ಯೋತಿ ಗಣೇಶ್ ಅವರೊಂದಿಗೆ ಚರ್ಚಿಸಲಾಗಿದೆ.
ಉತ್ಸವ ಜಿಲ್ಲೆಯ ಜನರಲ್ಲಿ ಹೊಸ ಉತ್ಸಾಹ, ಸಾಂಸ್ಕೃತಿಕ ಅಭಿಮಾನ ಮತ್ತು ಒಗ್ಗಟ್ಟು ಮೂಡಿಸಲಿ ಎಂದು ಹಾರೈಸಿದ ಸಚಿವರು, ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.




