ಎಸ್‌ಐಆರ್(ವಿಶೇಷ ತೀವ್ರ ಪರಿಷ್ಕರಣೆ) ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಆಡಳಿತಾಧಿಕಾರಿ(ವಿಎ) ಭುವನಾ(24) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತುಮಕೂರು ಜಿಲ್ಲಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ರಸ್ತೆ ಅಪಘಾತವಲ್ಲ, ಅಧಿಕಾರಿಗಳಿಂದ ಹೇರಲಾದ ಅತಿಯಾದ ಕಾರ್ಯದ ಒತ್ತಡದ ಪರಿಣಾಮವೆಂದು ಆರೋಪಿಸಿರುವ ಕಂದಾಯ ಇಲಾಖೆ ನೌಕರರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು.
ಡಿಸಿಎಂ ಜಿ ಪರಮೇಶ್ವರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ಮೃತ ಭುವನ ಫೋಟೊಗೆ ಪುಷ್ಪನಮನ ಸಲ್ಲಿಸಿದ ಅವರು ಪ್ರತಿಭಟನಕಾರ ಕುರಿತು ಮಾತನಾಡಿ, ಅನಿರ್ದಿಷ್ಟಾವಧಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಘಟನೆ ಹಿನ್ನೆಲೆ
ಭುವನಾ ಅವರು ತುಮಕೂರು ತಾಲೂಕಿನ ಹೊಳಕಲ್ಲು ಗ್ರಾಮ ಪಂಚಾಯಿತಿಯ ವಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಬೆಳಿಗ್ಗೆ ಎಸ್‌ಐಆರ್ ಕಾರ್ಯಕ್ಕೆ ಅವಸರವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಗೂಳೂರು ಸಮೀಪದ ಬೇವಿನಮರದಮ್ಮ ದೇವಸ್ಥಾನದ ಬಳಿ ಲಾರಿ ಡಿಕ್ಕಿ ಹೊಡೆದಿತ್ತು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಂದು ಸಂಜೆ ಅವರು ಕೊನೆಯುಸಿರೆಳೆದರು.
ಮೃತ ಅಧಿಕಾರಿ ಭುವನಾ ಅವರು ನೆಲಮಂಗಲ ತಾಲೂಕಿನ ವರದನಾಯಕಹಳ್ಳಿಯ ನಿವಾಸಿಯಾಗಿದ್ದು, ಜೂನ್ 28ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇತ್ತೀಚೆಗೆ ಕಂದಾಯ ದಿನಾಚರಣೆಯಲ್ಲಿ ಉತ್ತಮ ಸೇವೆಗಾಗಿ ಪ್ರಶಸ್ತಿ ಪಡೆದಿದ್ದರು. ಜುಲೈ 5ರಂದು ವರನ ಕಡೆಯವರು ಮನೆಗೆ ಬರಬೇಕಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ ವಿಧಿಯಾಟ ಆ ಕುಟುಂಬವನ್ನು ಶೋಕಸಾಗರಕ್ಕೆ ತಳ್ಳಿತ್ತು.
ʼರಾತ್ರಿ 10ರವರೆಗೆ ಸಭೆ, ಬೆಳಿಗ್ಗೆ ಮತ್ತೆ ಕೆಲಸʼ : ಕುಟುಂಬದ ಕಣ್ಣೀರು, ಆಕ್ರೋಶ
ಆಸ್ಪತ್ರೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಯನ್ನು ಕಂಡ ಮೃತ ಅಧಿಕಾರಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ರಾತ್ರಿ 10 ಗಂಟೆಯವರೆಗೆ ಸಭೆ ನಡೆಸಿ, ಬೆಳಿಗ್ಗೆ ಮತ್ತೆ ಕೆಲಸಕ್ಕೆ ಕರೆಯುತ್ತೀರಾ. ನಿಮ್ಮ ಪ್ರಶಸ್ತಿ, ಪ್ರಚಾರಕ್ಕಾಗಿ ನಮ್ಮ ಮಕ್ಕಳ ಜೀವ ಬೇಕೇ?” ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಭುವನಾ ಸಾವಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಆರೋಪಿಸಿರುವ ಕಂದಾಯ ಇಲಾಖೆ ಸಿಬ್ಬಂದಿ, ಕಳೆದ ಹಲವು ದಿನಗಳಿಂದ ಎಸ್‌ಐಆರ್ ಕಾರ್ಯದ ಹೆಸರಿನಲ್ಲಿ ಅತಿಯಾದ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದರು.

“ತಡರಾತ್ರಿವರೆಗೆ ಕೆಲಸ ಮಾಡಿಸಿ, ಬೆಳಿಗ್ಗೆಯೇ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗುತ್ತಿದೆ. ಕುಟುಂಬ ಜೀವನವೇ ಹಾಳಾಗುತ್ತಿದೆ. ನಿಗದಿತ ಸಮಯದೊಳಗೆ ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ ಮಾನವೀಯತೆ ಇಲ್ಲದ ಒತ್ತಡ ಬೇಡ” ಎಂದು ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟರು.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಬಹುತೇಕ ವಿಎಒಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳು ಸಿದ್ದಗಂಗಾ ಆಸ್ಪತ್ರೆ ಹಾಗೂ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
“ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವರ್ಗಾವಣೆಯಾಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಡಿಸಿಎಂ ಹಾಗೂ ಕಂದಾಯ ಸಚಿವ ಡಾ. ಜಿ ಪರಮೇಶ್ವರ್ ಸ್ಥಳಕ್ಕೆ ಬಂದು ಭರವಸೆ ನೀಡಬೇಕು” ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ ಬಿ ಸುರೇಶ್‌ಬಾಬು ಭೇಟಿ ನೀಡಿ ನೌಕರರಿಗೆ ಬೆಂಬಲ ಸೂಚಿಸಿದರು. ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯ ಮಾಹಿತಿ ನೀಡಿದರು.
ರಾಜ್ಯಮಟ್ಟದ ಹೋರಾಟದ ಎಚ್ಚರಿಕೆ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ದೂರವಾಣಿ ಮೂಲಕ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, “ವೈಯಕ್ತಿಕ ಪ್ರತಿಷ್ಠೆಗಾಗಿ ನೌಕರರನ್ನು ಬಲಿಪಶು ಮಾಡುವುದು ಸರಿಯಲ್ಲ. ಅಧಿಕಾರಿಗಳ ಒತ್ತಡದಿಂದ ಇಂತಹ ದುರಂತಗಳು ಮರುಕಳಿಸಬಾರದು. ಅಗತ್ಯವಿದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಯೋಗೀಶ್ ನಾಯಕ್ ಮಾತನಾಡಿ , “ಸುತ್ತೋಲೆಗಳಿಗೆ ವಿರುದ್ಧವಾಗಿ ತಡರಾತ್ರಿವರೆಗೆ ಕೆಲಸ ಮಾಡಿಸಿ ಬೆಳಿಗ್ಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹೇರಲಾಗಿದೆ. ಇದಕ್ಕೆ ಹೊಣೆಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಮೃತ ಭುವನಾ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮಾತನಾಡಿ, “ಪ್ರಶಸ್ತಿ ಮತ್ತು ಪ್ರಚಾರಕ್ಕಾಗಿ ಅಧಿಕಾರಿಗಳು ಅತಿಯಾದ ಒತ್ತಡ ಹೇರುತ್ತಿದ್ದಾರೆ. ಭುವನಾ ಸಾವಿಗೆ ಇದೇ ಕಾರಣ. ಈ ಒತ್ತಡ ಇಡೀ ರಾಜ್ಯದ ಕಂದಾಯ ಇಲಾಖೆಯ ಮೇಲೂ ದುಷ್ಪರಿಣಾಮ ಬೀರುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಸ್‌ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳಾ ವಿಎಗೆ ಅಪಘಾತ : ಪ್ರತಿಭಟನೆ
ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ರಾಜ್ಯಾದ್ಯಂತ ಹೋರಾಟ ವಿಸ್ತರಿಸುವ ಎಚ್ಚರಿಕೆಯನ್ನು ಸಂಘಟನೆಗಳು ನೀಡಿದ್ದು, ಭುವನಾ ಸಾವು ಈಗ ಕೇವಲ ಒಂದು ಅಪಘಾತದ ಪ್ರಕರಣವಾಗಿರದೆ, ಸರ್ಕಾರಿ ನೌಕರರ ಮೇಲಿನ ಕಾರ್ಯದ ಒತ್ತಡದ ಕುರಿತು ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿದೆ ಎಂದ ನೌಕರರು, ಡಿಸಿಎಂ ಡಾ. ಜಿ ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದರು. ಇದೀಗ ಡಿಸಿಎಂ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದಾರೆ.




