ಉಡುಪಿಯ ಖಾಸಗಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಿಂದುತ್ವವಾದಿ ಕೋಮು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ವಿರುದ್ಧ ಉಡುಪಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಶರಣ್ ಪಂಪ್ವೆಲ್, “ಜಿಹಾದಿ ರಾಕ್ಷಸಿಯರಿಗೆ ಹಿಂದು ರಾಕ್ಷಸರಾಗಿ ಉತ್ತರ ಕೊಡುತ್ತೇವೆ. ಇಂತಹ ದಾಳಿ ಇಂದಿಗೇ ಕೊನೆಯಾಗಬೇಕು. ಹಿಂದು ತಾಯಂದಿರು ಎಚ್ಚರ ಆಗಬೇಕು. ಸೌಟು, ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಬೇಕು. ಅನ್ಯಾಯವಾದಾಗ ತಲವಾರು, ಕತ್ತಿ, ಹಿಡಿಯಲು ಸಿದ್ಧರಾಗಬೇಕು” ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದರು.
ವಿಹಿಂಪ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಕೂಡ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅವರಿಬ್ಬರ ವಿರುದ್ಧ ಪ್ರಕರಣ ಐಪಿಸಿ ಸೆಕ್ಷನ್ 505(1),(2),(3), 506, 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.