ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ರೈತರು ತಾವೇ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದಕ್ಕಾಗಿ ಇಲಾಖೆಯ ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ಎಫ್‌ಐಡಿ (FID) ಸಂಖ್ಯೆ ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಮುಂಗಾರು ರೈತರ ಬೆಳೆ ಸಮೀಕ್ಷೆ 2026-27’ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಇ-ಕೆವೈಸಿ ಮೂಲಕ ಆಧಾರ್ ದೃಢೀಕರಣ ಪೂರ್ಣಗೊಳಿಸಿ, ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ದಾಖಲಿಸಿದ ನಂತರ ರೈತರ ಎಫ್‌ಐಡಿಗೆ ಸಂಬಂಧಿಸಿದ ಜಮೀನಿನ ಮಾಹಿತಿಯನ್ನು ಅಪ್ಲಿಕೇಶನ್‌ನಲ್ಲಿ ಪಡೆಯಬಹುದು.
ಮುಂದಿನ ಹಂತದಲ್ಲಿ ಸರ್ವೇ ನಂಬರ್, ಹಿಸ್ಸಾ ನಂಬರ್, ಮಾಲಕರ ಹೆಸರು ಸೇರಿದಂತೆ ಅಗತ್ಯ ಮಾಹಿತಿಯನ್ನು ಆಯ್ಕೆ ಮಾಡಿ, ಜಮೀನಿನ ಗಡಿರೇಖೆಯೊಳಗೆ ನಿಂತು ಬೆಳೆ ವಿವರ ದಾಖಲಿಸಿ, ಸ್ಥಳದಲ್ಲೇ ಫೋಟೋ ತೆಗೆದು ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
ಎಫ್‌ಐಡಿ ಸಂಖ್ಯೆ ಹೊಂದಿರದ ರೈತರು ತಮ್ಮ ಸಮೀಪದ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಎಫ್‌ಐಡಿ ಪಡೆದುಕೊಳ್ಳಬಹುದಾಗಿದೆ.
ಕುಂದಾಪುರ ತಾಲೂಕಿನ ರೈತರು ತಮ್ಮ ಜಮೀನಿನ ಸರ್ವೇ ನಂಬರ್‌ವಾರು ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಲ್ಲದೆ ನಿಗದಿತ ಅವಧಿಯೊಳಗೆ ತಾವೇ ಖುದ್ದಾಗಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ದಾಖಲಿಸಿ, ಮುಂಗಾರು 2026-27ರ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಕುಂದಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.





