ದೇಶದ ಕ್ಷೇತ್ರ ಮರುವಿಂಗಡಣೆಯ ಇತಿಹಾಸವನ್ನು ಗಮನಿಸಿದರೆ, ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಆಯೋಗಗಳನ್ನು ರಚಿಸಿ ಗಡಿಗಳನ್ನು ಮರುಹೊಂದಿಸಲಾಗಿದೆ. 1952ರಲ್ಲಿ ಮೊದಲ ಬಾರಿಗೆ 1951ರ ಜನಗಣತಿ ಆಧಾರದ ಮೇಲೆ ಆಯೋಗ ರಚನೆಯಾದಾಗ, ದೇಶದ ಒಟ್ಟು ಲೋಕಸಭೆ ಸೀಟುಗಳ ಸಂಖ್ಯೆ 494 ಇತ್ತು. ತದನಂತರ 1963ರಲ್ಲಿ (1961ರ ಜನಗಣತಿ ಆಧಾರ) ಸೀಟುಗಳ ಸಂಖ್ಯೆ 522ಕ್ಕೆ ಮತ್ತು 1973ರ (1971ರ ಜನಗಣತಿ) 3ನೇ ಆಯೋಗದ ವರದಿಯಂತೆ ಒಟ್ಟು ಸೀಟುಗಳು 543ಕ್ಕೆ ಏರಿಕೆಯಾದವು
ಪ್ರಜಾಪ್ರಭುತ್ವದ ಅತಿದೊಡ್ಡ ಪ್ರಕ್ರಿಯೆಗಳಲ್ಲಿ ಒಂದಾದ ‘ಕ್ಷೇತ್ರ ಮರುವಿಂಗಡಣೆ’ ಪ್ರಸ್ತುತ ದೇಶಾದ್ಯಂತ ತೀವ್ರ ಆತಂಕ ಹಾಗೂ ಚರ್ಚೆಗೆ ಕಾರಣವಾಗಿತ್ತು. ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸುವ ಈ ಪ್ರಕ್ರಿಯೆಯು, ಪ್ರತಿಯೊಬ್ಬ ಜನಪ್ರತಿನಿಧಿಗೆ ಸರಿಸಮಾನ ಜನಸಂಖ್ಯೆಯ ಪ್ರಾತಿನಿಧ್ಯವನ್ನು ಖಚಿತಪಡಿಸುವ ಸಂವಿಧಾನಾತ್ಮಕ ಉದ್ದೇಶವನ್ನು ಹೊಂದಿದೆ. ಆದರೆ, ಇತ್ತೀಚೆಗೆ ಏಪ್ರಿಲ್ 2026ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಿದ ಹೊಸ ಡಿಲಿಮಿಟೇಷನ್ ಮಸೂದೆಯು ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಈ ಬಾರಿಯ ಮರುವಿಂಗಡಣಾ ಯತ್ನವು ದೇಶದ ಹಿಂದಿನ ಎಲ್ಲಾ ಪ್ರಕ್ರಿಯೆಗಳಿಗಿಂತ ತೀರಾ ಭಿನ್ನವಾಗಿ ಹಾಗೂ ಬಿಜೆಪಿಯ ದುರುದ್ದೇಶಪೂರಿತ ಹೆಜ್ಜೆಯಾಗಿ ಗೋಚರಿಸುತ್ತಿದೆ.
ದೇಶದ ಕ್ಷೇತ್ರ ಮರುವಿಂಗಡಣೆಯ ಇತಿಹಾಸವನ್ನು ಗಮನಿಸಿದರೆ, ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಆಯೋಗಗಳನ್ನು ರಚಿಸಿ ಗಡಿಗಳನ್ನು ಮರುಹೊಂದಿಸಲಾಗಿದೆ. 1952ರಲ್ಲಿ ಮೊದಲ ಬಾರಿಗೆ 1951ರ ಜನಗಣತಿ ಆಧಾರದ ಮೇಲೆ ಆಯೋಗ ರಚನೆಯಾದಾಗ, ದೇಶದ ಒಟ್ಟು ಲೋಕಸಭೆ ಸೀಟುಗಳ ಸಂಖ್ಯೆ 494 ಇತ್ತು. ತದನಂತರ 1963ರಲ್ಲಿ (1961ರ ಜನಗಣತಿ ಆಧಾರ) ಸೀಟುಗಳ ಸಂಖ್ಯೆ 522ಕ್ಕೆ ಮತ್ತು 1973ರ (1971ರ ಜನಗಣತಿ) 3ನೇ ಆಯೋಗದ ವರದಿಯಂತೆ ಒಟ್ಟು ಸೀಟುಗಳು 543ಕ್ಕೆ ಏರಿಕೆಯಾದವು. ಈ ಆರಂಭಿಕ ಮೂರು ಮರುವಿಂಗಡಣೆಗಳು ದೇಶದ ಅಂದಿನ ಜನಸಂಖ್ಯೆಯ ಏರಿಕೆಗೆ ಅನುಗುಣವಾಗಿ ನಡೆಯುತ್ತಿದ್ದ ಅತ್ಯಂತ ಸಹಜ ಮತ್ತು ಯಾವುದೇ ರಾಜಕೀಯ ಕುತಂತ್ರಗಳಿಲ್ಲದ ಸುಗಮ ಪ್ರಕ್ರಿಯೆಯಾಗಿದ್ದವು.
ಆದರೆ, 1976ರಲ್ಲಿ ತರಲಾದ 42ನೇ ಸಂವಿಧಾನ ತಿದ್ದುಪಡಿಯು ಕ್ಷೇತ್ರ ಮರುವಿಂಗಡಣೆಯ ಇತಿಹಾಸದಲ್ಲಿಯೇ ಒಂದು ಅತ್ಯಂತ ಮಹತ್ವದ ಹಾಗೂ ದೂರದೃಷ್ಟಿಯ ತಿರುವು ನೀಡಿತು. ಆ ದಶಕದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕಠಿಣವಾಗಿ ಕುಟುಂಬ ನಿಯಂತ್ರಣವನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದವು. ಕೇವಲ ಜನಸಂಖ್ಯೆ ಆಧಾರದ ಮೇಲೆ ಸೀಟುಗಳನ್ನು ಹಂಚಿದರೆ, ಜನಸಂಖ್ಯಾ ನಿಯಂತ್ರಣ ಮಾಡಿದ ದಕ್ಷಿಣದ ಪ್ರಗತಿಪರ ರಾಜ್ಯಗಳಿಗೆ ಲೋಕಸಭೆಯಲ್ಲಿ ಸೀಟುಗಳು ಕಡಿಮೆಯಾಗುವ ದೊಡ್ಡ ಅಪಾಯವಿತ್ತು. ಈ ಅನ್ಯಾಯವನ್ನು ತಪ್ಪಿಸಲು ಮತ್ತು ಜನಸಂಖ್ಯಾ ನಿಯಂತ್ರಣವನ್ನು ಪ್ರೋತ್ಸಾಹಿಸಲು, ಅಂದಿನ ಸರ್ಕಾರ 1971ರ ಜನಗಣತಿಯ ಆಧಾರದಲ್ಲೇ ಲೋಕಸಭೆ ಸೀಟುಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ದಕ್ಷಿಣ ರಾಜ್ಯಗಳಿಗೆ ರಕ್ಷಣೆ ನೀಡಿತ್ತು.
ಈ ಐತಿಹಾಸಿಕ ಹಿನ್ನೆಲೆಯಲ್ಲಿ ಗಮನಿಸುವುದಾದರೆ, 1976ರಲ್ಲಿ ಹೇರಲಾಗಿದ್ದ ಈ ತಡೆಯನ್ನು 2001ರ 84ನೇ ತಿದ್ದುಪಡಿಯ ಮೂಲಕ ಇನ್ನಷ್ಟು ವರ್ಷ ಮುಂದೂಡಲಾಯಿತು. ಅಂದರೆ, 2026ರ ನಂತರ ನಡೆಯುವ ಮೊದಲ ಹೊಸ ಜನಗಣತಿಯ ಅಧಿಕೃತ ವರದಿ ಬರುವವರೆಗೂ ಈಗಿರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಹಾಗೆಯೇ 87ನೇ ತಿದ್ದುಪಡಿಯಡಿ, 2002ರಲ್ಲಿ ರಚನೆಯಾದ 4ನೇ ಡಿಲಿಮಿಟೇಷನ್ ಆಯೋಗವು 2001ರ ಜನಗಣತಿ ಆಧಾರದ ಮೇಲೆ ಕೇವಲ ರಾಜ್ಯಗಳ ಒಳಗಿನ ಕ್ಷೇತ್ರಗಳ ಗಡಿಗಳನ್ನು ಮಾತ್ರ ಮರುಹೊಂದಿಸಿತೇ ವಿನಃ, ಒಟ್ಟು 543 ಸೀಟುಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.
ಹೀಗಾಗಿ, ಪ್ರಸ್ತುತ ಅಸ್ತಿತ್ವದಲ್ಲಿರುವ ಲೋಕಸಭಾ ಕ್ಷೇತ್ರಗಳು 2008ರಿಂದ (2001ರ ಜನಗಣತಿ ಆಧಾರದಲ್ಲಿ) ಇದೇ ಸ್ವರೂಪದಲ್ಲಿ ಮುಂದುವರಿದುಕೊಂಡು ಬರುತ್ತಿವೆ. ಈ ಐತಿಹಾಸಿಕ ಹಿನ್ನೆಲೆಯಲ್ಲಿಯೇ, 2026ರ ಏಪ್ರಿಲ್ 16ರಂದು ಮೋದಿ ಸರ್ಕಾರವು ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026’, ‘ಡಿಲಿಮಿಟೇಷನ್ ಮಸೂದೆ’ ಹಾಗೂ ‘ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಸೂದೆ’ಗಳನ್ನು ಮಂಡಿಸಿದ್ದು ತೀವ್ರ ಆತಂಕಕ್ಕೆ ಕಾರಣವಾಯಿತು. 2026 ಅಥವಾ 2027ರ ಹೊಸ ಜನಗಣತಿಗಾಗಿ ಕಾಯದೆ, ಹಳೆಯ 2011ರ ಜನಗಣತಿಯ ಆಧಾರದ ಮೇಲೆಯೇ ತರಾತುರಿಯಲ್ಲಿ ಡಿಲಿಮಿಟೇಷನ್ ಮಾಡಲು ಮುಂದಾಗಿದ್ದು ಬಿಜೆಪಿ ಸರ್ಕಾರದ ಅತಿದೊಡ್ಡ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿತ್ತು. ಇದರ ಮೂಲಕ ಪ್ರಸ್ತುತವಿರುವ 543 ಲೋಕಸಭೆ ಸೀಟುಗಳನ್ನು ಬೃಹತ್ ಪ್ರಮಾಣದಲ್ಲಿ, ಅಂದರೆ ಸರಿಸುಮಾರು 816 ರಿಂದ 850ಕ್ಕೆ ಏಕಾಏಕಿ ಹೆಚ್ಚಿಸುವ ಅಪಾಯಕಾರಿ ಪ್ರಸ್ತಾಪವನ್ನು ಬಿಜೆಪಿ ಸರ್ಕಾರ ಮುಂದಿಟ್ಟಿತ್ತು.
ಇದನ್ನು ಓದಿದ್ದೀರಾ? ಶಿಕ್ಷಕರಿಗೆ SIR ಕರ್ತವ್ಯವೋ, ಮಕ್ಕಳ ಪಾಠವೋ- ಬಗೆಹರಿಯದ ಗೊಂದಲ
ಈ ಬಾರಿಯ 2026ರ ಮರುವಿಂಗಡಣಾ ಪ್ರಸ್ತಾಪವು ಹಿಂದಿನವುಗಳಿಗಿಂತ ಪ್ರಮುಖವಾಗಿ ಎರಡು ಕುತಂತ್ರದ ಅಂಶಗಳಲ್ಲಿ ಭಿನ್ನವಾಗಿತ್ತು. ಮೊದಲನೆಯದಾಗಿ, ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಹೆಚ್ಚಿಸಿದರೂ ಪ್ರತಿ ರಾಜ್ಯದ ಹಾಲಿ ಪ್ರಮಾಣವನ್ನು ಹಾಗೆಯೇ ಉಳಿಸಿಕೊಂಡು, ಹೆಚ್ಚುವರಿ ಸೀಟುಗಳನ್ನು ಹಂಚುವ ಕಣ್ಣೊರೆಸುವ ಭರವಸೆ ನೀಡಲಾಗಿತ್ತು. ಎರಡನೆಯದಾಗಿ, ಈ ಮರುವಿಂಗಡಣೆಯ ಪ್ರಕ್ರಿಯೆಯನ್ನು ನೇರವಾಗಿ ಶೇ. 33ರಷ್ಟು ‘ಮಹಿಳಾ ಮೀಸಲಾತಿ’ (ನಾರಿ ಶಕ್ತಿ ವಂದನ್ ಅಧಿನಿಯಮ) ಅನುಷ್ಠಾನಕ್ಕೆ ತಳಕುಹಾಕುವ ಮೂಲಕ ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ರಾಜಕೀಯ ಕುತಂತ್ರ ಮಾಡಲಾಗಿತ್ತು. ಈ ಹಿಂದೆ 1952 ರಿಂದ 2002ರವರೆಗಿನ ಯಾವ ಪ್ರಕ್ರಿಯೆಗಳಲ್ಲೂ ಈ ರೀತಿಯ ಶೇ. 50ಕ್ಕೂ ಹೆಚ್ಚಿನ ಸೀಟು ಹೆಚ್ಚಳವಾಗಲಿ ಅಥವಾ ಮೀಸಲಾತಿ ಕಾಯ್ದೆಯ ನೇರ ಜೋಡಣೆಯಾಗಲಿ ಇರಲಿಲ್ಲ.
ಸರ್ಕಾರದ ಈ ಅನ್ಯಾಯದ ಪ್ರಸ್ತಾಪವು ನಿರೀಕ್ಷೆಯಂತೆಯೇ ದೇಶದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ, ವಿಶೇಷವಾಗಿ ದಕ್ಷಿಣ ಮತ್ತು ಉತ್ತರ ಭಾರತದ ನಡುವಿನ ರಾಜಕೀಯ ವಿಭಜನೆಗೆ ಕಾರಣವಾಯಿತು. ಜನಸಂಖ್ಯೆ ಮಿತಿಮೀರಿರುವ ಉತ್ತರ ಪ್ರದೇಶ, ಬಿಹಾರದಂತಹ ಉತ್ತರದ ರಾಜ್ಯಗಳಿಗೆ ಸೀಟು ಹೆಚ್ಚಳದಿಂದ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದ್ದು, ದಕ್ಷಿಣದ ರಾಜ್ಯಗಳು ಶಾಸಕಾಂಗದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳಲಿವೆ ಎಂಬ ಆತಂಕ ತೀವ್ರವಾಯಿತು. ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣದ ಬಹುತೇಕ ರಾಜ್ಯಗಳ ನಾಯಕರು ಇದು ಮೋದಿ ಸರ್ಕಾರದ ಉತ್ತರದ ಪರವಾದ ಒಲವು ಮತ್ತು ದಕ್ಷಿಣ ವಿರೋಧಿ ನೀತಿ ಎಂದು ಕಟುವಾಗಿ ವಿರೋಧಿಸಿ, ಹೋರಾಟಕ್ಕಾಗಿ ‘ಜಂಟಿ ಕ್ರಿಯಾ ಸಮಿತಿ’ಯನ್ನು ರಚಿಸಿದರು. ಹಾಗೆಯೇ ನೋಟು ಅಮಾನ್ಯೀಕರಣದಂತೆ ಇದೊಂದು **’ದಕ್ಷಿಣದ ರಾಜ್ಯಗಳ ರಾಜಕೀಯ ಶಕ್ತಿ ಮತ್ತು ಪ್ರಾಮುಖ್ಯತೆಯನ್ನು ದಿಢೀರನೆ ಕಸಿದುಕೊಳ್ಳುವ ಮೋದಿ ಸರ್ಕಾರದ ತಂತ್ರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸ್ವರೂಪ ಎಷ್ಟರಮಟ್ಟಿಗೆ ತೀವ್ರವಾಗಿತ್ತೆಂದರೆ, ಡಿಎಂಕೆಯ ಸ್ಟಾಲಿನ್ನಂಥ ನಾಯಕರು ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿ ಇದನ್ನು ಕರಾಳ ಶಾಸನ ಎಂದು ಜರಿದರು. ಹಿಂದಿನ ಡಿಲಿಮಿಟೇಷನ್ ಪ್ರಕ್ರಿಯೆಗಳು ಸಾಮಾನ್ಯವಾಗಿ ಯಾವುದೇ ದೊಡ್ಡ ರಾಜಕೀಯ ಗದ್ದಲಗಳಿಲ್ಲದೆ ಸುಗಮವಾಗಿ ನಡೆಯುತ್ತಿದ್ದವು. ಆದರೆ, ಈ ಬಾರಿ ಆತುರದಲ್ಲಿ ಕರೆಯಲಾದ ವಿಶೇಷ ಅಧಿವೇಶನ ಮತ್ತು ದಕ್ಷಿಣದ ರಾಜ್ಯಗಳ ತೀವ್ರ ವಿರೋಧವು ಇಡೀ ಪ್ರಕ್ರಿಯೆಯ ಸ್ವರೂಪವನ್ನೇ ಬದಲಾಯಿಸಿಬಿಟ್ಟಿತು.
ದಕ್ಷಿಣ ರಾಜ್ಯಗಳ ತೀವ್ರ ವಿರೋಧದ ನಡುವೆಯೂ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ದೇಶದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗಲು ನಾವು ಬಿಡುವುದಿಲ್ಲ, ದಕ್ಷಿಣದ ಶೇಕಡಾವಾರು ಪ್ರಾತಿನಿಧ್ಯ ಕಡಿಮೆಯಾಗುವುದಿಲ್ಲ ಎಂದು ಎಂದಿನಂತೆ ಬಾಯಿಮಾತಿನ ಭರವಸೆ ನೀಡಿತು. ಆದರೆ, ಮೋದಿಯವರ ಕೇವಲ ಮೌಖಿಕ ಭರವಸೆಗಳನ್ನು ಒಪ್ಪಲು ವಿರೋಧ ಪಕ್ಷಗಳು ಸಿದ್ಧರಿರಲಿಲ್ಲ. ಇದರ ನೇರ ಪರಿಣಾಮವಾಗಿ, ಏಪ್ರಿಲ್ 17, 2026ರಂದು ಲೋಕಸಭೆಯಲ್ಲಿ ಈ ಮಸೂದೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಸಾಂವಿಧಾನಿಕ ಬಹುಮತ (ಕನಿಷ್ಠ 352 ಮತಗಳು) ಸಿಗಲಿಲ್ಲ. ಕೇವಲ 298 ಸಂಸದರ ಬೆಂಬಲ ದೊರೆತ ಕಾರಣ, ಮಸೂದೆ ಸೋತು ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿ ಅದನ್ನು ಅನಿವಾರ್ಯವಾಗಿ ಹಿಂಪಡೆಯಬೇಕಾಯಿತು.
ಮಸೂದೆ ವಿಫಲವಾದರೂ ಮೋದ ಸರ್ಕಾರ ಇನ್ನೂ ಕುತಂತ್ರ ನಡೆಸುತ್ತಲೇ ಇದೆ. ಆದರೆ ದಕ್ಷಿಣದ ರಾಜ್ಯಗಳ ಆತಂಕವನ್ನು ನಿವಾರಿಸಿ ಒಮ್ಮತ ಸಾಧಿಸದೆ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವ ಈ ಐತಿಹಾಸಿಕ ಪ್ರಕ್ರಿಯೆ ಸಾಕಾರಗೊಳ್ಳುವುದು ಅತ್ಯಂತ ಕಷ್ಟಸಾಧ್ಯ ಎಂಬುದು ಬಿಜೆಪಿ ನಾಯಕರು ಅರಿತುಕೊಳ್ಳಬೇಕಿದೆ.




