ಕರಾವಳಿ ಭಾಗದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ / ಶಾಶ್ವತ ಪೀಠ ಸ್ಥಾಪನೆಯ ಅಧ್ಯಯನಕ್ಕಾಗಿ ಮಾನ್ಯ ಮುಖ್ಯ ನ್ಯಾಯಮೂರ್ತಿ ಶ್ರೀ ವಿಭು ಬಖ್ರು ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿರುವುದನ್ನು ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರು ಹಾಗೂ ‘ಯು-ಆಕ್ಟ್’ (U-ACT) ಸಂಸ್ಥಾಪಕರಾದ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಅವರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ಮಾನ್ಯ ನ್ಯಾಯಮೂರ್ತಿ ಅನು ಶಿವರಾಮನ್, ಮಾನ್ಯ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ಮಾನ್ಯ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಈ ತ್ರಿಸದಸ್ಯ ಸಮಿತಿಯು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ವಕೀಲರ ಸಂಘಗಳು ಹಾಗೂ ಪಾಲುದಾರರನ್ನು ಸಂಪರ್ಕಿಸಿ ಸಮಗ್ರ ವರದಿ ಸಲ್ಲಿಸಲಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರೇಮ್ ಪ್ರಸಾದ್ ಶೆಟ್ಟಿ ಅವರು, ”ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ತೆಗೆದುಕೊಂಡಿರುವ ಈ ನಿರ್ಧಾರವು ನಮ್ಮ ದಶಕಗಳ ಕಾಲದ ನ್ಯಾಯ ವಿಕೇಂದ್ರೀಕರಣ ಹೋರಾಟದ ಹಾದಿಯಲ್ಲಿ ಅತ್ಯಂತ ಐತಿಹಾಸಿಕ ಮೈಲಿಗಲ್ಲಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಲಕ್ಷಾಂತರ ಸಾರ್ವಜನಿಕರು, ರೈತರು, ವ್ಯಾಪಾರಿಗಳು ಹಾಗೂ ಕಕ್ಷಿಗಾರರು ಅಪೀಲು ಮತ್ತು ಮೇಲ್ಮನವಿಗಳಿಗಾಗಿ ಬೆಂಗಳೂರಿನ ಪ್ರಧಾನ ಪೀಠಕ್ಕೆ 400-500 ಕಿಲೋಮೀಟರ್‌ಗೂ ಹೆಚ್ಚು ದೂರ ಪ್ರಯಾಣಿಸುವುದು ಭಾರಿ ಆರ್ಥಿಕ ಹಾಗೂ ದೈಹಿಕ ಹೊರೆಯಾಗಿತ್ತು. ಮಾನ್ಯ ಹೈಕೋರ್ಟ್ ಕೈಗೊಂಡಿರುವ ಈ ಕಾರ್ಯವಿಧಾನವು ಸಾರ್ವಜನಿಕರ ನ್ಯಾಯ ಸಮ್ಮತ ಬೇಡಿಕೆಗೆ ಸಿಕ್ಕ ಜಯವಾಗಿದ್ದು, ಸಾಮಾನ್ಯ ಜನರ ಮನೆ ಬಾಗಿಲಿಗೇ ನ್ಯಾಯವನ್ನು ತಲುಪಿಸುವ ದಿಕ್ಕಿನಲ್ಲಿ ಹೊಸ ಭರವಸೆ ಮೂಡಿಸಿದೆ.” ಎಂದರು.
ಇದೇ ಸಂದರ್ಭದಲ್ಲಿ, ಕರಾವಳಿ ಭಾಗದ ಜನರ ಈ ಆಶಯವನ್ನು ಮಾನ್ಯ ಹೈಕೋರ್ಟ್‌ಗೆ ತಲುಪಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ವಿವಿಧ ಸಂಘ ಸಂಸ್ಥೆಗಳು ಹಾಗೂ ಕರಾವಳಿ ಭಾಗದ ಜನಪ್ರತಿನಿಧಿಗಳನ್ನು ಸಮಿತಿಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
This video cannot be played in your browser. Open the video directly
ಬರುವ ದಿನಗಳಲ್ಲಿ ಮೂವರು ನ್ಯಾಯಮೂರ್ತಿಗಳ ಸಮಿತಿಗೆ ಉಡುಪಿ, ಮಂಗಳೂರು ಸೇರಿದಂತೆ ವಿವಿಧ ವಕೀಲರ ಸಂಘಗಳು, ನಾಗರಿಕ ಸಂಸ್ಥೆಗಳು ಮತ್ತು ಯು-ಆಕ್ಟ್ ಸಂಘಟನೆಗಳ ಸಹಯೋಗದೊಂದಿಗೆ ಪ್ರಕರಣಗಳ ವಿವರ, ಪ್ರಯಾಣದ ವೆಚ್ಚದ ದತ್ತಾಂಶಗಳು ಹಾಗೂ ಸೂಕ್ತ ಮೂಲಸೌಕರ್ಯಗಳ ಮಾಹಿತಿಯನ್ನೊಳಗೊಂಡ ವಿವರವಾದ ವರದಿಯನ್ನು ಸಲ್ಲಿಸಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.






