ಜೋಕಟ್ಟೆ ಸಮೀಪದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರೀ ಸ್ಫೋಟ ಹಾಗೂ ಬೆಂಕಿ ಅವಘಡದಲ್ಲಿ ಗುತ್ತಿಗೆ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಎಂಟು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬೆನ್ನಲ್ಲೇ ಕೈಗಾರಿಕಾ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಉನ್ನತ ಮಟ್ಟದ ಸಮಗ್ರ ತನಿಖೆಗೆ ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಬುಧವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ, ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್‌ನಲ್ಲಿ ಉಂಟಾದ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಎಂಆರ್‌ಪಿಎಲ್ ತಿಳಿಸಿದೆ. ಘಟಕವನ್ನು ತಕ್ಷಣ ಪ್ರತ್ಯೇಕಿಸಿ, ಸಂಸ್ಥೆಯ ತುರ್ತು ಪ್ರತಿಕ್ರಿಯಾ ಹಾಗೂ ಅಗ್ನಿಶಾಮಕ ತಂಡಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ.
ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶಬ್ದ ಕೇಳಿಸಿದ್ದು, ಹಲವು ಕಡೆ ಮನೆಗಳ ಬಾಗಿಲು, ಕಿಟಕಿ ಹಾಗೂ ಕಟ್ಟಡಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ. ದಟ್ಟ ಹೊಗೆ ಆವರಿಸಿದ್ದರಿಂದ ಜೋಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಉಂಟಾಗಿತ್ತು.
ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಮೃತ
ಅವಘಡದ ಬಳಿಕ ಸ್ಥಳದಲ್ಲಿ ಕಣ್ಮರೆಯಾಗಿದ್ದ ಮುಲ್ಕಿ ಮೂಲದ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ (23) ಅವರ ಮೃತದೇಹವು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಅವರು ಅವಘಡ ಸಂಭವಿಸಿದ ಪ್ರದೇಶದಲ್ಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು.
ಘಟನೆಯಲ್ಲಿ ಓರ್ವರಿಗೆ ಸುಟ್ಟ ಗಾಯಗಳಾಗಿದ್ದು, ಎಂಟು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿವಿಧ ವರದಿಗಳ ಪ್ರಕಾರ, ಘಟನೆಯ ನಿಖರ ಕಾರಣ ಮತ್ತು ಸಂಪೂರ್ಣ ಹಾನಿಯ ಕುರಿತು ತನಿಖೆ ಮುಂದುವರಿದಿದೆ.
ಉನ್ನತ ಮಟ್ಟದ ತನಿಖೆಗೆ ಯು.ಟಿ.ಖಾದರ್ ಆಗ್ರಹ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು, ಗಾಯಾಳುಗಳಿಗೆ ತಕ್ಷಣ ಉತ್ತಮ ಚಿಕಿತ್ಸೆ ಒದಗಿಸುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಬೇಕಿಲ್ಲ. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಎಂಆರ್‌ಪಿಎಲ್ ಸಂಸ್ಥೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಸಹಕಾರ ನೀಡಿದ ಜೋಕಟ್ಟೆ ಗ್ರಾಮಸ್ಥರನ್ನೂ ಅವರು ಶ್ಲಾಘಿಸಿದ್ದಾರೆ.
ಸಂತ್ರಸ್ತರಿಗೆ ಪರಿಹಾರಕ್ಕೆ ಪದ್ಮರಾಜ್ ಪೂಜಾರಿ ಒತ್ತಾಯ
ಸ್ಫೋಟ ಸಂಭವಿಸಿದ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಫೋಟದಿಂದ ಗಾಯಗೊಂಡವರಿಗೆ ತಕ್ಷಣ ಉಚಿತ ಹಾಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಸ್ಫೋಟದ ಪರಿಣಾಮ ಆಸುಪಾಸಿನ ಮನೆ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದರೆ, ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ತಕ್ಷಣ ಅಗತ್ಯ ನೆರವು ಹಾಗೂ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಾರೆನ್ಸ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಸುಭಾಶ್ಚಂದ್ರ ಕೊಳ್ನಾಡ್, ತಾಪಂ ಮಾಜಿ ಸದಸ್ಯ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಸಮಗ್ರ ತನಿಖೆಗೆ ಡಿವೈಎಫ್‌ಐ ಆಗ್ರಹ
ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದ ಸಿಎಸ್‌ಟಿ ಮೂರನೇ ಪ್ಲಾಂಟ್‌ನಲ್ಲಿ ಸಂಭವಿಸಿದ ಸ್ಫೋಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ.
ಎಂಆರ್‌ಪಿಎಲ್ ವಿಸ್ತರಿತ ಯೋಜನೆಯ ಕೋಕ್ ಸಲ್ಫರ್ ಘಟಕ ಆರಂಭಿಸುವ ಸಂದರ್ಭದಲ್ಲೇ ಡಿವೈಎಫ್‌ಐ ವಿರೋಧ ವ್ಯಕ್ತಪಡಿಸಿತ್ತು. ಅಪಾಯಕಾರಿ ಕೈಗಾರಿಕೆಗಳು ಸ್ಥಾಪನೆಯಾಗುವಾಗ ಸರ್ಕಾರವು ಅಪಾಯದ ಮೌಲ್ಯಮಾಪನ ನಡೆಸಬೇಕು ಹಾಗೂ ಅಪಾಯಕಾರಿ ರಾಸಾಯನಿಕಗಳ ಸಂಗ್ರಹ, ಬಳಕೆ ಮತ್ತು ನಿರ್ವಹಣೆಗೆ ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಕೈಗಾರಿಕಾ ವಲಯದೊಳಗೆ ತೀವ್ರ ನಿಗಾ ವ್ಯವಸ್ಥೆ ಇರಬೇಕು. ಆದರೆ ಪ್ರಮುಖ ಸುರಕ್ಷತಾ ಅಂಶಗಳನ್ನು ಕಡೆಗಣಿಸಿರುವ ಆರೋಪಗಳ ಕುರಿತು ತನಿಖೆ ನಡೆಯಬೇಕು ಎಂದು ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮನೋಜ್ ವಾಮಂಜೂರು ಮತ್ತು ಕಾರ್ಯದರ್ಶಿ ರಿಝ್ವಾನ್ ಹರೇಕಳ ಆಗ್ರಹಿಸಿದ್ದಾರೆ.
ಅವಘಡಕ್ಕೆ ಎಂಆರ್‌ಪಿಎಲ್ ಅನ್ನು ಹೊಣೆಗಾರನನ್ನಾಗಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಪರಿಸರ, ಜೀವಹಾನಿ, ಕಟ್ಟಡ ಮತ್ತು ಮನೆಗಳಿಗೆ ಉಂಟಾಗಿರುವ ಹಾನಿಗೆ ಕಂಪನಿಯಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುರಕ್ಷತಾ ಲೋಪದ ತನಿಖೆಗೆ ಎಸ್‌ಡಿಪಿಐ ಒತ್ತಾಯ
ಎಂಆರ್‌ಪಿಎಲ್ ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟವು ಸುತ್ತಮುತ್ತಲಿನ ಜನರಲ್ಲಿ ತೀವ್ರ ಆತಂಕ ಉಂಟುಮಾಡಿದೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ತಿಳಿಸಿದ್ದಾರೆ.
ಸ್ಫೋಟದ ಶಬ್ದ ಕಾಟಿಪಳ್ಳ, ಬಾಳ ಸೇರಿದಂತೆ ದೂರದ ಪ್ರದೇಶಗಳಲ್ಲಿಯೂ ಕೇಳಿಸಿಕೊಂಡಿದ್ದು, ಸುತ್ತಮುತ್ತಲಿನ ಮನೆಗಳು ಹಾಗೂ ಕಟ್ಟಡಗಳಿಗೆ ಹಾನಿಯಾಗಿರುವ ವರದಿಗಳ ಹಿನ್ನೆಲೆಯಲ್ಲಿ ಘಟನೆಯ ಗಂಭೀರತೆಯನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣವೇನು, ಸುರಕ್ಷತಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದಿದೆಯೇ ಹಾಗೂ ತುರ್ತು ಪರಿಸ್ಥಿತಿ ನಿರ್ವಹಣಾ ವ್ಯವಸ್ಥೆ ಸಮರ್ಪಕವಾಗಿತ್ತೇ ಎಂಬುದನ್ನು ಸ್ವತಂತ್ರ ಹಾಗೂ ಉನ್ನತ ಮಟ್ಟದ ತನಿಖೆಯ ಮೂಲಕ ಪತ್ತೆಹಚ್ಚಬೇಕು. ತನಿಖೆಯ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮನೆಗಳು, ಕಟ್ಟಡಗಳು ಹಾಗೂ ಇತರ ಆಸ್ತಿಗಳಿಗೆ ಆಗಿರುವ ಹಾನಿಯ ಕುರಿತು ಜಿಲ್ಲಾಡಳಿತ ತಕ್ಷಣ ಸಮಗ್ರ ಸಮೀಕ್ಷೆ ನಡೆಸಿ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಬೇಕು. ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೈಗಾರಿಕಾ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆ
ಎಂಆರ್‌ಪಿಎಲ್‌ನಂತಹ ಬೃಹತ್ ಕೈಗಾರಿಕಾ ಘಟಕಗಳ ಸುತ್ತಮುತ್ತ ಸಾವಿರಾರು ಜನರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅವಘಡಗಳು ಕೈಗಾರಿಕಾ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಘಟನೆಯ ನಿಖರ ಕಾರಣ, ಸುರಕ್ಷತಾ ಕ್ರಮಗಳ ಅನುಷ್ಠಾನ, ತುರ್ತು ನಿರ್ವಹಣಾ ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ಜನರ ಆಸ್ತಿ-ಪಾಸ್ತಿಗೆ ಉಂಟಾದ ಹಾನಿಯ ಕುರಿತು ಅಧಿಕೃತ ತನಿಖೆಯ ಬಳಿಕವೇ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.
ಘಟನೆಯ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗಿದ್ದು, ಸಂತ್ರಸ್ತರಿಗೆ ಪರಿಹಾರ, ಗಾಯಾಳುಗಳಿಗೆ ಚಿಕಿತ್ಸೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗಾರಿಕಾ ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




