ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ದೇವರ ಪೂಜೆಗೆ ತೆರಳಿದ್ದ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಘಟನೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಹಿಂದೂ ನಾವೆಲ್ಲ, ಹಿಂದೂ ನಾವೆಲ್ಲ ಒಂದು, ನಾವೆಲ್ಲ ಬಂಧು’ ಎಂದು ಘೋಷಿಸುವ ಹಿಂದೂ ಮುಖಂಡರು, ದೇವಸ್ಥಾನದ ಪೂಜೆಗೆ ತೆರಳಿದ ದಲಿತರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಮೌನವಾಗಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಿದ್ಧಲಿಂಗೇಶ್ವರ ಹಿಂದೂ ದೇವರಲ್ಲವೇ? ಪೂಜೆ ಸಲ್ಲಿಸಲು ತೆರಳಿದ ಚಾಮನಾಳ ಗ್ರಾಮದ ಮಾದಿಗ ಸಮುದಾಯದವರು ಹಿಂದೂಗಳಲ್ಲವೇ? ಗಣೇಶ ಮೆರವಣಿಗೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹಿಂದೂಗಳ ಏಕತೆ ಕುರಿತು ಮಾತನಾಡುವವರು, ಪೂಜೆಗೆ ತೆರಳಿದ ದಲಿತ ಹಿಂದೂಗಳ ಮೇಲೆ ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ.
This video cannot be played in your browser. Open the video directly

ಹಲ್ಲೆಯಲ್ಲಿ ಸುಮಾರು 10 ಮಂದಿ ಗಾಯಗೊಂಡು ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹಿಂದೂಗಳೆಂದರೆ ನಿರ್ದಿಷ್ಟ ಪಕ್ಷ ಅಥವಾ ಹಿಂದೂ ಸಂಘಟನೆಗಳ ಸದಸ್ಯರು ಮಾತ್ರವೇ? ದಲಿತ ಸಮುದಾಯದವರೂ ಹಿಂದೂಗಳೇ ಅಲ್ಲವೇ ಎಂಬ ಪ್ರಶ್ನೆಗೆ ಹಿಂದೂ ಮುಖಂಡರು ಉತ್ತರಿಸಬೇಕು ಎಂದು ಅವರು ಹೇಳಿದ್ದಾರೆ.
ದಲಿತರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿರುವ 14ಕ್ಕೂ ಅಧಿಕ ಮಂದಿಯನ್ನು ತಕ್ಷಣ ಬಂಧಿಸಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.






