ಉಡುಪಿ ನಗರದ ರಾಷ್ಟ್ರೀಯ ಹೆದ್ದಾರಿಯ ಸಿಂಡಿಕೇಟ್ ವೃತ್ತದಿಂದ ರಜತಾದ್ರಿ ಜಿಲ್ಲಾಧಿಕಾರಿ ಸಂಕೀರ್ಣವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಉಡುಪಿ ನಗರಸಭೆಯ ವಾಣಿಜ್ಯ ಸಂಕೀರ್ಣದ ಎದುರು ನಡುರಸ್ತೆಯಲ್ಲೇ ಅಪಾಯಕಾರಿ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರಿಗೆ ಜೀವಭಯ ಉಂಟುಮಾಡುವಂತಾಗಿದೆ.
ಈ ರಸ್ತೆ ನಗರದ ಪ್ರಮುಖ ವಾಹನ ದಟ್ಟಣೆ ರಸ್ತೆಯಾಗಿದ್ದು, ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ತೆರಳುವ ಸಿಬ್ಬಂದಿ, ವಿದ್ಯಾರ್ಥಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಗುಂಡಿಗಳು ಗಮನಕ್ಕೆ ಬಾರದೆ ಹಲವು ದ್ವಿಚಕ್ರ ವಾಹನ ಸವಾರರು ಎಡವಿ ಬಿದ್ದಿರುವ ಘಟನೆಗಳು ನಡೆದಿರುವ ಕುರಿತು ದೂರುಗಳು ಕೇಳಿಬಂದಿವೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಾಹನಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ, ಕಣ್ಣೆದುರಿನ ಈ ಗಂಭೀರ ಸಮಸ್ಯೆ ಇನ್ನೂ ಪರಿಹಾರವಾಗದಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣವೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ವಿಳಂಬವಾದಲ್ಲಿ ರಾಜ್ಯದ ಮುಖ್ಯಮಂತ್ರಿಯವರ ಗಮನ ಸೆಳೆಯುವ ಉದ್ದೇಶದಿಂದ ವಿನೂತನ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದ್ದಾರೆ.






