ಸುರತ್ಕಲ್‌ನ HPCL ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡ ಮಹಿಳಾ ಹೊರಗುತ್ತಿಗೆ ಕಾರ್ಮಿಕರ 81 ದಿನಗಳ ಧರಣಿ ಕೊನೆಗೊಂಡಿದ್ದು, ಅವರ ಸುದೀರ್ಘ ಹೊರಾಟಕ್ಕೆ ಗೆಲುವಾಗಿದೆ. HPCL ಕಂಪೆನಿಯು ವಜಾಗೊಳಿಸಿದ್ದ ನಾಲ್ವರು ಮಹಿಳಾ ಕಾರ್ಮಿಕರನ್ನು ಮರುನೇಮಕ ಮಾಡಿಕೊಂಡಿದೆ.
ಸುರತ್ಕಲ್‌ನ ಶರಣವ್ವ ಭಜಂತ್ರಿ, ಪಾರವ್ವ ಗಾಣಿಗೇರ, ಸೂರವ್ವ ಕೊಲ್ಲದ್, ಸುವರ್ಣ ಪಾಟೀಲ ಎಂಬ ಗುತ್ತಿಗೆ ಕಾರ್ಮಿಕರು HPCL ಸಂಸ್ಥೆಯಲ್ಲಿ ಉದ್ಯೋಗಲ್ಲಿದ್ದು ದಿಢೀರನೇ ಯಾವುದೇ ಕಾರಣಗಳಿಲ್ಲದೇ ಕಂಪೆನಿಯು ನಾಲ್ವರನ್ನು ಕೆಲಸದಿಂದ ವಜಾಗೊಳಿಸೊತ್ತು. ಇದರಿಂದ ಕಂಗಾಲಾಗಿದ್ದ ಮಹಿಳಾ ಕಾರ್ಮಿಕರ ಸುರತ್ಕಲ್ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ 81 ದಿನಗಳ ಅನಿರ್ಧಿಷ್ಟಾವಧಿ ಧರಣಿಯ ನಂತರ ಇಂದು ಕೊನೆಗೂ ಕೆಲಸಕ್ಕೆ ಮರಳಿ ನೇಮಿಸಲು ಒಪ್ಪಿಗೆ ಸೂಚಿಸಿದೆ.

ಕೇಂದ್ರ ಕಾರ್ಮಿಕ ಇಲಾಖೆಯ ಮಂಗಳೂರು ಉಪ ಕಾರ್ಮಿಕ ಆಯುಕ್ತರ ಸಮ್ಮುಖ ಇಂದು ನಡೆದ ಸಭೆಯಲ್ಲಿ HPCL ಅಧಿಕಾರಿಗಳು ಕೆಲಸ ಕಳೆದುಕೊಂಡು ಧರಣಿ ನಡೆಸುತ್ತಿರುವ ನಾಲ್ಕು ಜನ ಗುತ್ತಿಗೆ ಕಾರ್ಮಿಕರನ್ನು ಉದ್ಯೋಗಕ್ಕೆ ಮರು ನೇಮಕ ಮಾಡಿಕೊಳ್ಳಲು ಸಿದ್ದರಿರುವುದಾಗಿ ತಿಳಿಸಿದ್ದಾರೆ.
ಕಾರ್ಮಿಕ ಉಪ ಆಯುಕ್ತರು ಡಿಸೆಂಬರ್ 2 ನೇ ತಾರೀಖು ಇನ್ನೊಂದು ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಮಾಡಿದ್ದಾರೆ, ಅದರ ಪೂರ್ವದಲ್ಲಿ ನಾಲ್ಕು ಜನ ಮಹಿಳಾ ಗುತ್ತಿಗೆ ಕಾರ್ಮಿಕರ ಮರು ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಕಂಪೆನಿ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ಅದರ ಆಧಾರದಲ್ಲಿ ಕಾರ್ಮಿಕ ಉಪ ಆಯುಕ್ತರು ಉದ್ಯೋಗ ಮರಳಿ ಒದಗಿಸುವ ಖಾತರಿ ನೀಡಿದ್ದು, ಧರಣಿ ಹಿಂಪಡೆದು ಉದ್ಯೋಗಕ್ಕೆ ಸೇರ್ಪಡೆಗೊಳ್ಳುವಂತೆ ಮಹಿಳಾ ಕಾರ್ಮಿಕರಿಗೆ ಸೂಚಿಸಿದ್ದಾರೆ ಎಂದು ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ತಿಳಿಸಿದರು.
ಈ ನಿಟ್ಟಿನಲ್ಲಿ ಸುದೀರ್ಘ ದಿನಗಳ ಹೋರಾಟದ ಗೆಲುವಿನ ಹಿನ್ನಲೆಯಲ್ಲಿ ಇಂದು ಸಂಜೆ ಸುರತ್ಕಲ್ ಬಾಳದಲ್ಲಿರುವ HPCL ಗೇಟ್ ಮುಂಭಾಗ ನಡೆಯುತ್ತಿದ್ದ ಮಹಿಳಾ ಕಾರ್ಮಿಕರ ಧರಣಿಯನ್ನು ನಾಗರಿಕ ಹೋರಾಟ ಸಮಿತಿಯ ನಾಯಕರು ಸಿಹಿ ಹಂಚುವ ಮೂಲಕ ಮುಕ್ತಾಯಗೊಳಿಸಿದೆ.
ಸಿಐಟಿಯು ಹಾಗು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಮುನ್ನಡೆಸಿದ್ದ ಸುದೀರ್ಘ 81 ದಿನಗಳ ಹೋರಾಟಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ ಸೇರಿದಂತೆ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ ಸಹಿತ ಹಲವು ಜನಪರ ಸಂಘಟನೆಗಳು, ಸ್ಥಳೀಯ ಮುಂದಾಳುಗಳು ಬೆಂಬಲಕ್ಕೆ ನಿಂತಿದ್ದರು.
ಹೋರಾಟಕ್ಕೆ ಬೆಂಬಲ ನೋಡಿದ್ದ, ಮಾಜಿ ಶಾಸಕ ಮೊಯ್ದಿನ್ ಬಾವ, ಸಿಐಟಿಯು ನಾಯಕರಾದ ಮೀನಾಕ್ಷಿ ಸುಂದರಮ್, ಬಿ ಎಮ್ ಭಟ್, ಸುನಿಲ್ ಕುಮಾರ್ ಬಜಾಲ್ ಸೇರಿಮದಂತೆ ಪ್ರತಿಯೊಬ್ಬರಿಗೂ ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ದನ್ಯವಾದಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.




