ಹುಟ್ಟಿದ ಕೆಲವೇ ಗಂಟೆಗಳಾಗಿದ್ದ ನವಜಾತ ಗಂಡು ಶಿಶುವನ್ನು ಕಸದ ರಾಶಿಗೆ ಎಸೆದು ಹೋಗಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಸೇತುವೆ ಕೆಳಭಾಗದ ಕಸದ ರಾಶಿಯಲ್ಲಿ ನವಜಾತ ಶಿಶು ಅಳುತ್ತಿರುವುದನ್ನು ಗಮನಿಸಿದ ಕುರಿಗಾಯಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅಧಿಕಾರಿಗಳು ಶಿಶುವನ್ನು ತಕ್ಷಣ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸುರೇಬಾನ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಜಾತ ಶಿಶುವನ್ನು ಕಸದ ರಾಶಿಗೆ ಎಸೆದು ಹೋಗಿರುವವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಭಾರೀ ಮಳೆ ಅಬ್ಬರ: ಬೆಳಗಾವಿ ಖಾನಾಪುರ ಶಾಲೆಗಳಿಗೆ ರಜೆ, ಎಂಟು ಸೇತುವೆಗಳು ಜಲಾವೃತ
ಈ ಅಮಾನವೀಯ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




