“ದ್ವೇಷ ಭಾಷಣ ಮಾಡುವವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗಳು (ಕೋರ್ಟ್ ಪ್ರೊಸಿಡಿಂಗ್ಸ್) ನಡೆಯಬೇಕು. ಆಗಲೇ ಅವರಿಗೆ ಬುದ್ಧಿ ಬರುತ್ತದೆ” ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದ್ದಾರೆ.
ಶ್ರೀರಂಗಪಟ್ಟಣ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಲು ಹಾಗೂ ಅವುಗಳನ್ನು ರದ್ದುಗೊಳಿಸಲು ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ, ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ್ದ ದ್ವೇಷ ಭಾಷಣದ ತುಣುಕುಗಳನ್ನು ನ್ಯಾಯಮೂರ್ತಿ ಆಲಿಸಿದ್ದಾರೆ. ತೀವ್ರ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೂರುದಾರರ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ವಾದ ಮಂಡಿಸಿ, “ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಕಾರ್ಯಕ್ರಮದ ವೇಳೆ ಮುಖ್ಯ ಭಾಷಣಕಾರರಾಗಿದ್ದ ಹಿಂದುತ್ವ ಕೋಮುವಾದಿ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹನುಮನ ವಿಚಾರಗಳ ಬದಲಾಗಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ದ್ವೇಷಪೂರಿತ ಮಾತುಗಳನ್ನಾಡಿದ್ದಾರೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
“ಶ್ರೀರಂಗಪಟ್ಟಣ ಪ್ರಕರಣದಲ್ಲಿ ಭಟ್ ಅವರಿಗೆ ಜಾಮೀನು ನೀಡುವಾಗ ‘ಮುಂದೆ ಇಂತಹ ಅಪರಾಧ ಮರುಕಳಿಸಬಾರದು’ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಅದನ್ನು ಉಲ್ಲಂಘಿಸಿ ಪುತ್ತೂರಿನ ಉಪ್ಪಳಿಗೆಯಲ್ಲಿ ಮತ್ತೆ ಮುಸ್ಲಿಂ ಮಹಿಳೆಯರ ವಿರುದ್ಧ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಕಲ್ಲಡ್ಕ ಭಟ್ ವಿರುದ್ಧ ಈಗಾಗಲೇ 12 ಭಾಷಣಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಲ್ಲಿ ತಡೆಯಾಜ್ಞೆ ತಂದುಕೊಂಡು ಮತ್ತೆ ಹೋಗಿ ವಿಷ ಕಾರುವ ಭಾಷಣಗಳನ್ನು ಮಾಡುತ್ತಾರೆ. ಶ್ರೀರಂಗಪಟ್ಟಣ ಪ್ರಕರಣದಲ್ಲಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಎಫ್‌ಎಸ್‌ಎಲ್ ವರದಿಯಲ್ಲಿ ಅವರ ಧ್ವನಿ ಮಾದರಿ ದೃಢಪಟ್ಟಿದೆ” ಎಂದು ಕೋರ್ಟ್‌ಗೆ ತಿಳಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, “ಈ ಪ್ರಕರಣಗಳಲ್ಲಿ ಯಾವುದೇ ನೈಜ ಸಂತ್ರಸ್ತರೇ ಇಲ್ಲ. ಕೇವಲ ಹೋರಾಟಗಾರರು ಈ ಕೇಸ್ ದಾಖಲಿಸಿದ್ದಾರೆ. ಅವರು ಸಾಮಾನ್ಯ ಭಾಷಣ ಮಾಡುತ್ತಾರೆ, ಆದರೆ ಅದು ಕೆಲವರಿಗೆ ದ್ವೇಷ ಭಾಷಣದಂತೆ ಕೇಳಿಸುತ್ತದೆ. ಪ್ರಭಾಕರ್ ಭಟ್ ಅವರು ದ್ವೇಷ ಭಾಷಣ ಮಾಡಿಲ್ಲ, ಮಾಡುವುದೂ ಇಲ್ಲ” ಎಂದು ಸಮರ್ಥಿಸಿಕೊಂಡರು.
ವಕೀಲ ಅರುಣ್ ಶ್ಯಾಮ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, “ಅವರಿಗೆ (ಕಲ್ಲಡ್ಕ ಭಟ್) 80 ವರ್ಷ ವಯಸ್ಸಾಗಿದೆ ಎಂದು ಹೇಳುತ್ತೀರಿ. ಆದರೆ ಈ ರೀತಿ ಏಕೆ ಮಾತನಾಡಬೇಕು? ಅವರಿಗೆ ಸುಮ್ಮನಿರಲು ಸಾಧ್ಯವಿಲ್ಲವೇ? ದ್ವೇಷ ಭಾಷಣ ಮಾಡದೆಯೇ ಮಾತನಾಡಲು ಆಗುವುದಿಲ್ಲವೇ? ಒಮ್ಮೆ ಕೇಸು ಎದುರಿಸಿದರೆ ಬುದ್ಧಿ ಬರುತ್ತದೆ. ಅವರ ವಿರುದ್ಧ ವಿಚಾರಣೆ ನಡೆಸಬೇಕು” ಎಂದು ಹೇಳಿದರು.



