ಮಾದಕ ದ್ರವ್ಯಮುಕ್ತ ಭಾರತ ನಿರ್ಮಾಣದ ಉದ್ದೇಶದಿಂದ ಯುವಜನರಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಹಾಗೂ ಮೈ ಭಾರತ್ (MY Bharat), ಉಡುಪಿ ಇವರ ಸಹಯೋಗದಲ್ಲಿ ‘ನಶಾಮುಕ್ತ ಯುವ’ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀ ರಾಜೀವ್ ಗಾಂಧಿ ಎಜುಕೇಶನ್ ಅಂಡ್ ವೆಲ್ಫೇರ್ ಟ್ರಸ್ಟ್ (ರಿ.)ನ ಸ್ಪಂದನ ಡಿ-ಅಡಿಕ್ಷನ್ ಸೆಂಟರ್‌ನ ಆಪ್ತ ಸಮಾಲೋಚಕ ಅಭಿಷೇಕ್ ಮಾತನಾಡಿ, ಯುವಜನರು ಅರಿವಿಲ್ಲದೆ ಮಾದಕ ದ್ರವ್ಯಗಳ ವ್ಯಸನದ ಸುಳಿಗೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ವ್ಯಸನವೇ ಕಾಯಿಲೆ ಎಂದು ತಿಳಿಯುವ ವೇಳೆಗೆ ಅನೇಕರು ತಮ್ಮ ಯೌವನ ಕಳೆದುಕೊಂಡಿರುತ್ತಾರೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವುದಲ್ಲದೆ, ಜೀವನದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಸ್ಪಂದನ ಡಿ-ಅಡಿಕ್ಷನ್ ಸೆಂಟರ್‌ನ ಯೋಜನಾ ನಿರ್ದೇಶಕಿ ನಿಶಾ ಶೆಟ್ಟಿ ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ಅನೇಕ ಕೌಟುಂಬಿಕ ಸಮಸ್ಯೆಗಳ ಮೂಲ ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನವಾಗಿದೆ. ವ್ಯಸನವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಇಡೀ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ. ಆದ್ದರಿಂದ ಯುವಜನತೆ ಎಚ್ಚೆತ್ತುಕೊಂಡು ದುಶ್ಚಟಗಳಿಂದ ದೂರವಿರಬೇಕು. ಜಾಗೃತ ಹಾಗೂ ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮೈ ಭಾರತ್, ಉಡುಪಿಯ ನಿರ್ವಾಹಕಿ ಶ್ಯಾಮಲಾ ಅವರು ಮಾದಕ ದ್ರವ್ಯ ವಿರೋಧಿ ಭಾರತ ನಿರ್ಮಾಣದ ಪ್ರತಿಜ್ಞಾವಿಧಿ ಬೋಧಿಸಿದರು.
ಕಾಲೇಜಿನ ಮಾದಕ ದ್ರವ್ಯ ವಿರೋಧಿ ಸಮಿತಿಯ ಸಂಚಾಲಕ ಡಾ. ರವೀಶ್ ಬಿ. ಸ್ವಾಗತಿಸಿದರು. ಮೈ ಭಾರತ್‌ನ ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಫಿಯಾ, ಶೈಕ್ಷಣಿಕ ಸಂಯೋಜಕರಾದ ಉಮಾಶ್ರೀ ಹಾಗೂ ಸುನೀತಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕೃತಿ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪಡಿಯಾರ್ ಪ್ರಾರ್ಥಿಸಿದರು. ಸಿಂಧು ಭಟ್ ವಂದಿಸಿದರು.







