ಇಂದು ಬೆಳಗಿನ ಜಾವದಿಂದಲೇ ಉಡುಪಿ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಇಡೀ ಪರಿಸರದಲ್ಲಿ ಕತ್ತಲು ಆವರಿಸಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಭಾರಿ ಮಳೆಯ ನಡುವೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾದ ಬಗ್ಗೆ ವರದಿಯಾಗಿದೆ.
ಇನ್ನು ವಿವಿಧೆಡೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಬೆಳಗ್ಗಿನಿಂದಲೂ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.





