ಇತ್ತೀಚೆಗೆ ಮರ ಬಿದ್ದು ಮೃತಪಟ್ಟ ಸದಾನಂದ ಪ್ರಭು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಅರಣ್ಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗೆ ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮನವಿ ಸಲ್ಲಿಸಿದರು.
ಹೆಬ್ರಿ ಭಾಗದಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆಗಳು ಹಾಗೂ ಮನೆಗಳಿಗೆ ಅಪಾಯಕಾರಿಯಾಗಿರುವ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಸ್ತೆ ಬದಿಯಲ್ಲಿ ನೀರಿನ ಪೈಪ್, ಕೇಬಲ್ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ನಿರಂತರವಾಗಿ ಜೆಸಿಬಿ ಮೂಲಕ ಆಳವಾಗಿ ಹೊಂಡಗಳನ್ನು ತೆಗೆಯಲಾಗುತ್ತಿದೆ. ಇದರಿಂದ ಮರಗಳ ಬುಡದಲ್ಲಿರುವ ಬೇರುಗಳು ಸಡಿಲಗೊಂಡು, ಹಸಿ ಮರಗಳೂ ಸಹ ಗಾಳಿ-ಮಳೆಗೆ ಉರುಳಿ ಬೀಳುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯದಿಂದ ಒಣಮರಗಳಷ್ಟೇ ಅಲ್ಲದೆ, ಹಸಿರು ಮರಗಳೂ ಸಹ ಬೀಳುವ ಸ್ಥಿತಿಯಲ್ಲಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕು. ಆ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಅವರು ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಜನರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
“ಮುಂದಿನ ದಿನಗಳಲ್ಲಿ ಅನಾಹುತ ಆಗುವ ಮುಂಚೆಯೇ ಎಚ್ಚೆತ್ತುಕೊಂಡರೆ ಅಮೂಲ್ಯ ಜೀವಗಳನ್ನು ಉಳಿಸಬಹುದು. ಕಣ್ಣು ಮುಚ್ಚಿ ಕುಳಿತರೆ ಮನೆಯ ದೀಪವೇ ಹಾರಿ ಹೋದಂತಾಗುತ್ತದೆ” ಎಂದು ಅವರು ಹೇಳಿದರು.






