ಉಡುಪಿ ಜಿಲ್ಲೆಯ ನೇಜಾರಿನಲ್ಲಿ ಇತ್ತೀಚೆಗೆ ತಾಯಿ ಮತ್ತು ಮೂರು ಮಕ್ಕಳ ಕೊಲೆ ನಡೆದ ಮನೆಗೆ ಉಡುಪಿ ಕ್ಯಾಥಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರ ಪ್ರತಿನಿಧಿಗಳು ಮತ್ತು ಸಮನ್ವಯ ಸೌಹಾರ್ದ ಸಮಿತಿ ತೊಟ್ಟಾಂ ಇದರ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಉಡುಪಿ ಧರ್ಮಪ್ರಾಂತ್ಯದ ಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಘಟನೆಯ ಕುರಿತು ಅತೀವ ಆಘಾತ ಮತ್ತು ನೋವನ್ನು ವ್ಯಕ್ತಪಡಿಸಿದ್ದು, “ಇಂತಹ ಘಟನೆ ಬುದ್ದಿವಂತರ ಜಿಲ್ಲೆಯಾದ ಉಡುಪಿಯಲ್ಲಿ ನಡೆದಿರುವುದು ಆಘಾತಕಾರಿಯಾಗಿದ್ದು, ನೂರ್ ಮಹಮ್ಮದ್ ಮತ್ತು ಅವರ ಪುತ್ರ ಹಾಗೂ ಇಡೀ ಕುಟುಂಬದ ನೋವಿನಲ್ಲಿ ಕ್ರೈಸ್ತ ಸಮುದಾಯ ಭಾಗಿಯಾಗಿದೆ. ಘಟನೆಗೆ ಕಾರಣನಾದ ಆರೋಪಿಯನ್ನು ಕೂಡಲೇ ಬಂಧಿಸಿರುವ ಜಿಲ್ಲೆಯ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ” ಎಂದು ನೂರ್ ಮಹಮ್ಮದ್ ಮತ್ತವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜಗಳ ಬಿಡಿಸಲು ಬಂದ ಪೊಲೀಸರ ವಾಹನವನ್ನೇ ಕದ್ದೊಯ್ದ ಭೂಪ!
ಈ ವೇಳೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಸಮನ್ವಯ ಸೌಹಾರ್ದ ಸಮಿತಿ ತೊಟ್ಟಂ ಇದರ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್, ಸದಸ್ಯರುಗಳಾದ ಸುನಿಲ್ ಫೆರ್ನಾಂಡಿಸ್, ಲೆಸ್ಲಿ ಆರೋಝಾ, ಬ್ಲೆಸಿಲ್ಲಾ ಕ್ರಾಸ್ತಾ, ಪ್ರಸಾದ್, ಪ್ರಭಾಕರ್, ಕಾಂಗ್ರೆಸ್ ಮುಖಂಡ ಎಂ ಎ ಗಫೂರ್ ಹಾಗೂ ಇತರರು ಇದ್ದರು.