ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಹರಿಕಾರ, ಸಜ್ಜನ ರಾಜಕಾರಣಿ ಹಾಗೂ ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷ ರಮಾನಂದ ನಾಯಕ ಹಿಚ್ಚಡ (78) ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಇಂದು ಸಂಜೆ ಅಂಕೋಲಾ ತಾಲ್ಲೂಕಿನ ಅವರ ಸ್ವಗ್ರಾಮ ಹಿಚ್ಚಡಕ್ಕೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಮಾನಂದ ನಾಯಕರು ಜನತಾ ಪರಿವಾರದ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸಗಳು ಇಂದಿಗೂ ಮಾದರಿಯಾಗಿವೆ.
ಈ ಸುದ್ದಿ ಓದಿದ್ದೀರಾ ? ಹೊನ್ನಾವರ | ಅಂಪೈರ್ ತೀರ್ಪಿಗೆ ಆಕ್ಷೇಪ: ಜಗಳ ಬಿಡಿಸಲು ಹೋದ ವೃದ್ಧ ರೈತನ ಮೇಲೆ ಬ್ಯಾಟ್‌ನಿಂದ ಹಲ್ಲೆ
ಜಿಲ್ಲೆಯ ಶೈಕ್ಷಣಿಕ ಮತ್ತು ಸಾಮಾಜಿಕ ವಲಯಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸದ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಜಿಲ್ಲೆಯ ಬಹುಕಾಲದ ಕನಸಾದ ‘ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ’ಕ್ಕಾಗಿ ರಮಾನಂದ ನಾಯಕರು ನಡೆಸಿದ ಹೋರಾಟ ಚಿರಸ್ಮರಣೀಯ ವಾಗಿದೆ
ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಸತತ 25 ವರ್ಷಗಳ ಕಾಲ ಅವರು ಈ ಯೋಜನೆಗಾಗಿ ಹಗಲಿರುಳು ಶ್ರಮಿಸಿದ್ದರು. ಕೇವಲ ರಾಜಕಾರಣಕ್ಕೆ ಸೀಮಿತವಾಗದೆ ಸಹಕಾರಿ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೂ ತಮ್ಮದೇ ಆದ ಅನುಪಮ ಕೊಡುಗೆ ನೀಡಿದ್ದಾರೆ.
ಗಣ್ಯರ ಸಂತಾಪ: ರಮಾನಂದ ನಾಯಕ ಅವರ ಅಗಲಿಕೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಎನ್. ವಾಸರೆ ಹಾಗೂ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ ಜಿಲ್ಲೆಯ ಹಲವು ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.




