ಉತ್ತರ ಕನ್ನಡ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಭಾಗವಾಗಿ ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ತಾರ್ಕಿಕ ವ್ಯತ್ಯಾಸ ಹೊಂದಿರುವ ಪ್ರಕರಣಗಳ ಮೊದಲ ನೋಟಿಸ್‌ಗಳ ವಿಚಾರಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಒಟ್ಟು 65,248 ಪ್ರಕರಣಗಳಿದ್ದು, ಈ ಪೈಕಿ 64,749 ನೋಟಿಸ್‌ಗಳನ್ನು ಈಗಾಗಲೇ ವಿತರಿಸಲಾಗಿದೆ.
ಈವರೆಗೆ 39,804 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 24,945 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಸೆಪ್ಟೆಂಬರ್ ಅಂತ್ಯದೊಳಗೆ ಬಾಕಿ ಪ್ರಕರಣಗಳ ವಿಚಾರಣೆಯನ್ನೂ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ; ಕಿಂಗ್‌ಪಿನ್‌ಗಳ ಪತ್ತೆ ಎಂದು?
ಇದುವರೆಗೆ ನಡೆದ ವಿಚಾರಣೆಯಲ್ಲಿ ಮರಣ ಹೊಂದಿರುವ ಅಥವಾ ದ್ವಿ-ನೋಂದಣಿ ಹೊಂದಿರುವ 85 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು. ಹಳಿಯಾಳ ಕ್ಷೇತ್ರದಲ್ಲಿ 14,012 ನೋಟಿಸ್‌ಗಳಲ್ಲಿ 8,907 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಕಾರವಾರದಲ್ಲಿ 10,446 ನೋಟಿಸ್‌ಗಳಲ್ಲಿ 5,881, ಕುಮಟಾದಲ್ಲಿ 8,344 ನೋಟಿಸ್‌ಗಳಲ್ಲಿ 4,984, ಭಟ್ಕಳದಲ್ಲಿ 13,660 ನೋಟಿಸ್‌ಗಳಲ್ಲಿ 6,889, ಶಿರಸಿಯಲ್ಲಿ 8,821 ನೋಟಿಸ್‌ಗಳಲ್ಲಿ 5,428 ಹಾಗೂ ಯಲ್ಲಾಪುರದಲ್ಲಿ 9,965 ನೋಟಿಸ್‌ಗಳಲ್ಲಿ 7,715 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 23 ಕೊನೆಯ ದಿನವಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸೆಪ್ಟೆಂಬರ್ 19 ಮತ್ತು 20ರಂದು ನಡೆದ ಮತದಾರರ ವಿಶೇಷ ಆಂದೋಲನದಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗಾಗಿ 2,613 ಅರ್ಜಿಗಳು, ಆಕ್ಷೇಪಣೆಗಾಗಿ 89 ಹಾಗೂ ತಿದ್ದುಪಡಿಗಾಗಿ 1,395 ಅರ್ಜಿಗಳು ಸ್ವೀಕರಿಸಲಾಗಿದೆ ಎಂದರು.
ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 23 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 15,732 ಮತದಾರರು ನೋಂದಣಿಯಾಗಿದ್ದಾರೆ. ಹೊಸದಾಗಿ ಸೇರ್ಪಡೆಯಾಗಲು ಬಯಸುವ ಮತದಾರರು ನಮೂನೆ–18ರಲ್ಲಿ ಅರ್ಜಿಯನ್ನು ಜಿಲ್ಲೆಯ ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂಜಯ್ ಸಾಲುಂಕೆ, ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ಪಕ್ಷದ ತಾಲೂಕು ಉಪಾಧ್ಯಕ್ಷ ಬಾಬು ಶೇಖ್, ಬ್ಲಾಕ್ ಅಧ್ಯಕ್ಷ ಅರವಿಂದ ಕಲಗುಟ್ಕರ್ ಹಾಗೂ ಚುನಾವಣಾ ಶಾಖೆಯ ತಹಶೀಲ್ದಾರ್ ಪ್ರಮೋದ್ ನಾಯ್ಕ ಉಪಸ್ಥಿತರಿದ್ದರು.




