ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ಗ್ರಾಮಸ್ಥ ಕೃಷ್ಣ ಎಂಬುವವರು ಗ್ರಾಮ ಪಂಚಾಯಿತಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ತಮ್ಮ ಅಳಲನ್ನು ತೋಡಿಕೊಂಡ ಕೃಷ್ಣ ಅವರು,”ಚಿನ್ನಸಂದ್ರ ಗ್ರಾಮದ ನಮ್ಮ ಬ್ಲಾಕ್‌ನಲ್ಲಿ ಕಳೆದ 15 ದಿನಗಳಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಈ ಬಗ್ಗೆ ಪಂಚಾಯಿತಿ ಆಡಳಿತಾಧಿಕಾರಿ ಮತ್ತು ವಾಟರ್‌ಮ್ಯಾನ್ ಬಳಿ ವಿಚಾರಿಸಿದರೆ,ಮೋಟಾರ್ ಕೆಟ್ಟುಹೋಗಿದೆ ಎಂಬ ಸಿದ್ಧ ಸಬೂಬು ಹೇಳುತ್ತಾರೆ. ಆದರೆ, ಯಾವುದೇ ನಿಗದಿತ ಸಮಯ ಪಾಲಿಸದೆ, ಗೇಟ್‌ವಾಲ್ವ್‌ಗಳನ್ನು ಮನಬಂದಂತೆ ತಿರುಗಿಸಿ ಅರ್ಧಂಬರ್ಧ ನೀರು ಬಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನೀರಿನ ಸಮಸ್ಯೆ ಕುರಿತು ಆಡಳಿತಾಧಿಕಾರಿಗೆ ಫೋನ್ ಮಾಡಿ ಪ್ರಶ್ನಿಸಿದಾಗ,ಅವರು ಜವಾಬ್ದಾರಿಯುತವಾಗಿ ಉತ್ತರಿಸುವ ಬದಲಿಗೆ ಏಕವಚನದಲ್ಲಿ ಮಾತನಾಡಿ ಫೋನ್ ಕಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ,ನಿಮಿಷಗಳಲ್ಲೇ ಸ್ಥಳೀಯ ರಾಜಕೀಯ ಮುಖಂಡರ ಮೂಲಕ ನನಗೆ ಫೋನ್ ಮಾಡಿಸಿ ಒತ್ತಡ ಹೇರುವ ತಂತ್ರ ಹೂಡಿದ್ದಾರೆ.ಭವಿಷ್ಯದಲ್ಲಿ ನಮ್ಮಂತಹ ಸಾಮಾನ್ಯ ಜನರಿಗೆ ಬೆದರಿಕೆ ಹಾಕಿಸಲು ಹಿಂಜರಿಯುವುದಿಲ್ಲವೇ?ಎಂದು ಕೃಷ್ಣ ಆತಂಕ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ಬೋರ್‌ವೆಲ್‌ಗಳ ನಿರ್ವಹಣೆಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಕೃಷ್ಣ ಆರೋಪಿಸಿದ್ದಾರೆ.ಗ್ರಾಮದಲ್ಲಿ ಎಷ್ಟು ಬೋರ್‌ವೆಲ್‌ಗಳಿವೆ,ಎಷ್ಟು ಲೀಟರ್ ನೀರು ಪಂಪ್ ಆಗುತ್ತಿದೆ, ಟ್ಯಾಂಕ್‌ನಿಂದ ಎಷ್ಟು ಲೀಟರ್ ನೀರು ಯಾವ್ಯಾವ ಲೈನ್‌ಗೆ ಹರಿಯುತ್ತಿದೆ ಎಂಬ ಬಗ್ಗೆ ಯಾವುದೇ ರೀತಿಯ ದಾಖಲೆ ಅಥವಾ ರಿಜಿಸ್ಟರ್ ನಿರ್ವಹಿಸುತ್ತಿಲ್ಲ.ವಾಟರ್‌ಮ್ಯಾನ್ ಮತ್ತು ಆಡಳಿತಾಧಿಕಾರಿ ಇಬ್ಬರೂ ಶಾಮೀಲಾಗಿ ಸಾರ್ವಜನಿಕರಿಗೆ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ..?ಕೋಲಾರ | ಬರ ಪರಿಹಾರಕ್ಕೆ ಕೂಡಲೇ ಅನುದಾನ ನೀಡದಿದ್ದರೆ ಬೆಂಗಳೂರು ಚಲೋ ಮಾಡ್ತೇವೆ : ಸಿ.ಎಂ.ಆರ್. ಶ್ರೀನಾಥ್
This video cannot be played in your browser. Open the video directly
ಪಂಚಾಯಿತಿ ಸಿಬ್ಬಂದಿಯಿಂದ ಯಾವುದೇ ತೊಂದರೆಯಿಲ್ಲವಾದರೂ,ಆಡಳಿತಾಧಿಕಾರಿ ಹಾಗೂ ವಾಟರ್‌ಮ್ಯಾನ್ ಅವರ ನಡೆ ಖಂಡನೀಯವಾಗಿದೆ.ಈ ಕೂಡಲೇ ಹಿರಿಯ ಹಾಗೂ ಉನ್ನತ ಅಧಿಕಾರಿಗಳು ಚಿನ್ನಸಂದ್ರ ಗ್ರಾಮ ಪಂಚಾಯಿತಿಯ ನೀರಿನ ಸಮಸ್ಯೆಯತ್ತ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.





