ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿ ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನರಸಾಪುರದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ನರಸಾಪುರ ಕಾಲೇಜು ಮೈದಾನದಲ್ಲಿ ಸೆ.26ರಂದು ನಡೆಯಲಿರುವ ನರಸಾಪುರ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನದ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಹಾಗೂ ವಿವಿಧ ಇಲಾಖೆಗಳಿಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯುವ ಮೂಲಕ ಅರ್ಜಿಗಳನ್ನು ಸ್ವೀಕರಿಸಿ, ಅಹವಾಲುಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನರಸಾಪುರ ಹೋಬಳಿಯ ಎಲ್ಲ ಗ್ರಾಮಗಳ ಸಾರ್ವಜನಿಕರಿಗೆ ಕಾರ್ಯಕ್ರಮದ ಕುರಿತು ಈಗಾಗಲೇ ಪ್ರಚಾರ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಟೊ ಪ್ರಚಾರ ಹಾಗೂ ಕರಪತ್ರಗಳ ಮೂಲಕ ಜನರಿಗೆ ಮಾಹಿತಿ ನೀಡಲು ಕ್ರಮವಹಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಹಾಗೂ ಸಂಸದ ಎಂ. ಮಲ್ಲೇಶ್ ಬಾಬು ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಿ ಸಾರ್ವಜನಿಕರ ಅರ್ಜಿ, ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಸಾಧ್ಯವಿರುವ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುವುದು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಮೂಲಕ ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಲು ಕ್ರಮವಹಿಸಲಾಗುವುದು ಎಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಬರ ಪರಿಹಾರಕ್ಕೆ ಕೂಡಲೇ ಅನುದಾನ ನೀಡದಿದ್ದರೆ ಬೆಂಗಳೂರು ಚಲೋ ಮಾಡ್ತೇವೆ : ಸಿ.ಎಂ.ಆರ್. ಶ್ರೀನಾಥ್
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಬೈರೇಗೌಡ, ಚೊಕ್ಕಪುರ ಚೌಡಪ್ಪ, ರಾಜಕಲ್ಲಹಳ್ಳಿ ಶ್ರೀನಿವಾಸ್, ವೀರೇಂದ್ರ ಪಾಟೀಲ್, ಚಿನ್ನಾಪುರ ನಾರಾಯಣಸ್ವಾಮಿ, ನದೀಂ, ನವೀನ್, ಜಾಲಿ ಬಾನು, ಮೋಹನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪಿಡಿಒಗಳು ಇದ್ದರು.




