ಭಟ್ಕಳ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಟ್ಕಾ ಜುಗಾರಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಸೆಪ್ಟೆಂಬರ್ 22 ಮತ್ತು 23ರಂದು ವಿವಿಧೆಡೆ ನಡೆದ ಕಾರ್ಯಾಚರಣೆಗಳಲ್ಲಿ ಹಲವು ಮಂದಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ನಗದು ಹಣ, ಮಟ್ಕಾ ಚೀಟಿಗಳು ಹಾಗೂ ಜುಗಾರಾಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಖಲಾಗಿರುವ ಪ್ರಕರಣಗಳ ಪ್ರಕಾರ, ತಲಗೇರಿ ಜಾಲಿ ನಿವಾಸಿ ನಾಗರಾಜ ವೆಂಕಟಪ್ಪ ನಾಯ್ಕ್ ಎಂಬಾತನಿಂದ ₹820, ತಲಾಂಧ ನಿವಾಸಿ ನಾಗರಾಜ ನಾರಾಯಣ ನಾಯ್ಕ್ ನಿಂದ ₹510, ಮೂಡಶಿರಾಲಿ ನಿವಾಸಿ ಉದಯ ನಾಗಪ್ಪ ನಾಯ್ಕ್ ನಿಂದ ₹520, ತಗ್ಗರಗೋಡ ನಿವಾಸಿ ಮಂಜುನಾಥ ನಾರಾಯಣ ನಾಯ್ಕ್ ನಿಂದ ₹480 ಹಾಗೂ ಬೆಳ್ನೆ ನಿವಾಸಿ ಪ್ರಮೋದ ಗೋಯ್ದ ನಾಯ್ಕ್ ನಿಂದ ₹500 ನಗದು ವಶಪಡಿಸಿಕೊಂಡಿರುವುದಾಗಿ ಪ್ರಕರಣಗಳಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಹಡೀಲ್-ಸಬ್ಬತ್ತಿ ನಿವಾಸಿ ಪುಂಡಲೀಕ ಈರಪ್ಪ ನಾಯ್ಕ್ ಮತ್ತು ಕಾರಗದ್ದೆ-ವೆಂಕಟಾಪುರ ನಿವಾಸಿ ಚಂದ್ರ ಶೇಷ ನಾಯ್ಕ್ ವಿರುದ್ಧವೂ ಕೆ.ಪಿ. ಕಾಯ್ದೆಯ ಕಲಂ 78(3)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಂದ ಮಟ್ಕಾ ಚೀಟಿ, ಬಾಲ್ ಪೆನ್ ಹಾಗೂ ಕ್ರಮವಾಗಿ ₹210 ಮತ್ತು ₹500 ನಗದು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ ತೆರವಿಗೆ ಬಿಜೆಪಿ ಆಗ್ರಹ; ಇಲ್ಲವಾದರೆ ಪ್ರತಿಭಟನೆ ಎಚ್ಚರಿಕೆ
ಸಣ್ಣ ಮೊತ್ತದ ಹಣ… ದೊಡ್ಡ ಪ್ರಶ್ನೆ: ಈ ಪ್ರಕರಣಗಳಲ್ಲಿ ಗಮನ ಸೆಳೆಯುವ ಅಂಶವೆಂದರೆ, ಕಾರ್ಯಾಚರಣೆಯಲ್ಲಿ ಸಿಕ್ಕಿರುವ ನಗದು ಬಹುತೇಕ ₹200ರಿಂದ ₹800ರೊಳಗಿನ ಸಣ್ಣ ಮೊತ್ತವಾಗಿದೆ. ಸ್ಥಳದಲ್ಲಿ ಮಟ್ಕಾ ಬರೆಯುವ ವ್ಯಕ್ತಿಗಳು ಸಿಕ್ಕಿಬೀಳುತ್ತಿರುವುದು ಒಂದು ಭಾಗವಾದರೆ, ಈ ಅಂಕೆ-ಸಂಖ್ಯೆಗಳ ಜುಗಾರಾಟದ ವ್ಯವಹಾರವನ್ನು ನಿರಂತರವಾಗಿ ನಡೆಸುವ ದೊಡ್ಡ ಜಾಲದ ಬಗ್ಗೆ ತನಿಖೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ.
ಪ್ರತಿ ಬಾರಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅಲ್ಪ ಪ್ರಮಾಣದ ಹಣ ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡ ಬಳಿಕವೂ ಕೆಲವೇ ದಿನಗಳಲ್ಲಿ ಇದೇ ರೀತಿಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ ಎಂಬ ಸಾರ್ವಜನಿಕ ಚರ್ಚೆ ಇದೆ. ಹೀಗಾಗಿ ಕೇವಲ ಸ್ಥಳದಲ್ಲಿ ಸಿಗುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವುದಕ್ಕಿಂತ, ಈ ದಂಧೆಗೆ ಹಣ, ಅಂಕೆ-ಸಂಖ್ಯೆ, ಸಂಪರ್ಕ ಮತ್ತು ಮಾಹಿತಿ ಒದಗಿಸುವ ವ್ಯವಸ್ಥೆ ಎಲ್ಲಿಂದ ನಡೆಯುತ್ತಿದೆ ಎಂಬುದರತ್ತ ತನಿಖೆ ಸಾಗಬೇಕಿದೆ.
ಮಟ್ಕಾ ದಂಧೆಯ ಹಿಂದಿನ ಜಾಲ ಪತ್ತೆಯಾಗುವುದೇ? ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಬರೆಯುವವರು ಸಿಕ್ಕಿಬೀಳುತ್ತಿರುವಾಗ, ಈ ದಂಧೆಯ ಪ್ರಮುಖ ನಿರ್ವಹಣೆ ಎಲ್ಲಿಂದ ನಡೆಯುತ್ತಿದೆ? ಅಂಕೆ-ಸಂಖ್ಯೆಗಳನ್ನು ಯಾರು ನೀಡುತ್ತಾರೆ? ಹಣದ ವಹಿವಾಟು ಯಾರ ಮೂಲಕ ನಡೆಯುತ್ತದೆ? ಸ್ಥಳೀಯವಾಗಿ ಮಟ್ಕಾ ಬರೆಯುವವರಿಗೆ ಹಣ ಹಾಗೂ ಇತರ ಮಾಹಿತಿ ಪೂರೈಸುವವರು ಯಾರು? ಎಂಬ ಪ್ರಶ್ನೆಗಳು ಸಹಜವಾಗಿ ಎದುರಾಗುತ್ತವೆ.
ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ಸ್ಥಳದಲ್ಲಿ ಸಿಕ್ಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ ಅವರ ಸಂಪರ್ಕಗಳು, ಹಣದ ವಹಿವಾಟು ಹಾಗೂ ದಂಧೆಯ ಹಿಂದೆ ಇರುವ ಜಾಲದ ಕುರಿತು ಸಮಗ್ರ ತನಿಖೆ ಅಗತ್ಯವಾಗಿದೆ. ಇಲ್ಲವಾದರೆ, ಒಬ್ಬರು ಸಿಕ್ಕಿಬಿದ್ದ ನಂತರ ಮತ್ತೊಬ್ಬರು ಅದೇ ಕೆಲಸ ಮುಂದುವರಿಸುವ ಸಾಧ್ಯತೆ ಇದೆ.
ಮಟ್ಕಾಕ್ಕೆ ಕಡಿವಾಣ ಯಾವಾಗ? ಮಟ್ಕಾ ಜುಗಾರಾಟದಿಂದ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿರುವುದರಿಂದ, ಇದನ್ನು ಕೇವಲ ಸಣ್ಣಪುಟ್ಟ ಪ್ರಕರಣಗಳಾಗಿ ಪರಿಗಣಿಸದೆ, ದಂಧೆಯ ಮೂಲವನ್ನೇ ಪತ್ತೆಹಚ್ಚುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
ಭಟ್ಕಳದಲ್ಲಿ ಮಟ್ಕಾ ದಂಧೆ ನಿಜವಾಗಿಯೂ ಸಂಪೂರ್ಣವಾಗಿ ನಿಲ್ಲಬೇಕಾದರೆ, ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಬರೆಯುವ ವ್ಯಕ್ತಿಗಳನ್ನು ಪತ್ತೆಹಚ್ಚುವುದರ ಜೊತೆಗೆ, ಅವರ ಹಿಂದೆ ಇರುವ ಸಂಪರ್ಕ ಜಾಲ, ಹಣದ ಮೂಲ ಮತ್ತು ದಂಧೆಯನ್ನು ನಿರ್ವಹಿಸುವವರ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಲ್ಲವಾದರೆ, ಇಂದು ಸಣ್ಣ ಮೊತ್ತದೊಂದಿಗೆ ಪ್ರಕರಣ ದಾಖಲಾಗುವವರು ಸಿಕ್ಕರೂ, ಕೆಲವು ದಿನಗಳ ಬಳಿಕ ಅದೇ ಜಾಗದಲ್ಲಿ ಮತ್ತೊಂದು ಮಟ್ಕಾ ಚೀಟಿ ಬರೆಯುವ ತಂಡ ಕಾಣಿಸಿಕೊಳ್ಳಲಿದೆ.




