“ಸಹಕಾರಿ ಆಂದೋಲನವನ್ನು ಕಟ್ಟಿವಾಗ ಆರ್ಥಿಕ ಬದ್ಧತೆಯ ಜೊತೆಗೆ ವಿಶ್ವಾಸಾರ್ಹತೆಯು ಮುಖ್ಯ. ಅಂತಹ ಒಳ್ಳೆಯ ಸಂಘಟನೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಕೆ.ಇ.ಬಿ ಸಹಕಾರಿ ಸಂಘಕ್ಕಿದೆ. ಎಂದು ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎಫ್.ಎನ್ ಗಾಜೀಗೌಡ್ರ ಹೇಳಿದರು.
ಹಾವೇರಿ ಪಟ್ಟಣದ ಕೆ.ಇ.ಬಿ ಕಲ್ಯಾಣ ಮಂಟಪದಲ್ಲಿ ಜರುಗಿದ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಹೆಸ್ಕಾಂ ನೌಕರರ ಸಹಕಾರಿ ಸಂಘದ ೪೮ನೇ ಸರ್ವಸದಸ್ಯರ ಮಹಾಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಗಾಜೀಗೌಡ್ರ ಮೇಲಿನಂತೆ ನುಡಿದರು.
ಮುಖ್ಯ ಅತಿಥಿ ಬಸವ ಬಳಗದ ಅಧ್ಯಕ್ಷರು ನ್ಯಾಯವಾದಿ ವ್ಹಿ.ಜಿ. ಯಳಗೇರಿ ಅವರು ಮಾತನಾಡಿ, “ಕಾಯಕದ ಮಹತ್ವ ಸಾರುವ ಲೈನ್‌ಮನ್ ಗಳು ಹೆಚ್ಚು ಇರುವ ಕೆ.ಇ.ಬಿ ಸಹಕಾರಿ ಸಂಘದ ಬಸವಣ್ಣನವರ ಕಾಯಕ ತತ್ವವನ್ನು ಅರ್ಥೈಸಿಕೊಂಡು ಯಶಸ್ವಿಯಾಗಿ ಅರ್ಧಶತಮಾನದತ್ತ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು ವಿಜಯಕುಮಾರ ಮುದಕಣ್ಣನವೆ ಮಾತನಾಡಿ, “ಸಂಘಟನೆಯನ್ನು ಕಟ್ಟುವಷ್ಟೇ, ಅದನ್ನು ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಒಗ್ಗಟ್ಟು ಸಹಕಾರಿ ಆಂದೋಲನದ ಮೂಲಮಂತ್ರವಾಗ ಬೇಕು” ಎಂದರು.
ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ಹನುಮಂತಪ್ಪ ಸಿ. ಮರಿದ್ಯಾಮಣ್ಣನವರ ವಹಿಸಿ ಮಾತನಾಡಿ, “ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನನ್ನ ಮೇಲಿದ್ದು, ಎಲ್ಲ ಸದಸ್ಯರುಗಳ ಸಹಕಾರದ ಮೇಲೆ ಮುನ್ನಡೆಸುವೆ ಎಂದು ಹೇಳಿ, ಅಧಿಕಾರಕ್ಕಿಂತ ಸದಸ್ಯರ ಹಿತ ಮತ್ತು ವಿಶ್ವಾಸ ಮುಖ್ಯ” ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವತೀಯ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ೩೮ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪಿ.ಯು.ಸಿ ಯಲ್ಲಿ ಕುಮಾರಿ ಅರ್ಚನಾ ಎಸ್. ಕುರಗುಂದ, ಎಸ್.ಎಸ್.ಎಲ್.ಸಿ ಯಲ್ಲಿ ಕುಮಾರಿ ಕುಮದಾ ಕೆ. ಹಡಪದ ಅತಿ ಹೆಚ್ಚು ಅಂಕೆ ಪಡೆದವರು. ಇವರು ತಲಾ ೧೦ ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದರು.
ಮಹಾಸಭೆಯನ್ನುದ್ದೇಶಿಸಿ ಸರ್ವಶ್ರೀ ಶಿವಾನಂದ ಬಿ. ಹಾದಿಮನಿ, ಎಂ.ಎಸ್. ಕುಮ್ಮೂರ, ಕೆ.ಎನ್. ಅಗಡಿ, ಎ.ಕೆ. ಯಮನೂರ, ಸಿ.ಎನ್. ಬಡ್ನಿ, ಎಚ್. ಮೊಹ್ಮದ್ ಅಮಾನುಲ್ಲಾ ಮುಮತಾದವರು ಮಾತನಾಡಿದರು. ೨೦೨೫-೨೬ನೇ ಸಾಲಿನ ಕಾರ್ಯದರ್ಶಿ ವರದಿ, ಹಣಕಾಸಿನ ವ್ಯವಹಾರಗಳನ್ನು ಪತ್ತಿನ ಕಾರ್ಯದರ್ಶಿ ಗಣೇಶ ಎಸ್.ಬಿ, ಉಪಾಧ್ಯಕ್ಷ ಮೊಹ್ಮದ್ ಅಜರುದ್ದೀನ ಎಹ್, ಶೇಖ್ ಸನದಿ, ಸದಸ್ಯರುಗಳಾದ ಉಮೇಶ ಹನುಮನಾಳ, ಸಿ.ಎಸ್.ಅಜ್ಜಣ್ಣನವರ, ಶ್ರೀಮತಿ ವಿಶಾಲ ಕೂಸನೂರ ಹಾಗೂ ಶಂಕರ ಎ ಮಂಡಿಸಿದರು. ಕಾಂತೇಶ ಅಂಗಡಿ ಮತ್ತು ನಾಗರಾಜ ಮಡ್ಲೂರ ಪ್ರಾರ್ಥನೆ ಹಾಡಿದರು. ಶಂಕರ ಕಾಳಶೆಟ್ಟ ಸ್ವಾಗತ ಮತ್ತು ನಿರೂಪಣೆಯನ್ನು ಮಾಡಿದರು ಕೊನೆಯಲ್ಲಿ ಎಂ.ಬಿ. ಮಿಶ್ರಿಕೋಟಿ ಎಲ್ಲರನ್ನು ವಂದಿಸಿದರು.




