2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬಸ್ಥರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಅಪರಾಧಿಗಳ ಶಿಕ್ಷೆಯನ್ನು ಅಮಾನತುಗೊಳಿಸಿರುವ ಸುಪ್ರೀಂ ಕೋರ್ಟ್, ಅವರಿಗೆ ಜಾಮೀನು ಮಂಜೂರು ಮಾಡಿದೆ. ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಪ್ರತಿಕ್ರಿಯಿಸಿರುವ ಬಿಲ್ಕಿಸ್ ಬಾನೋ, “ನೋವು, ಆಘಾತ, ಅಪನಂಬಿಕೆಯಲ್ಲಿದ್ದೇನೆ” ಎಂದು ಬೇಸರ ವ್ಯಕ್ತಪಸಿದ್ದಾರೆ.
ಅಪರಾಧಿಗಳಾದ ಬಿಪಿನ್‌ಚಂದ್ ಕನೈಯಾಲಾಲ್ ಜೋಶಿ ಅಲಿಯಾಸ್ ಲಾಲಾ ಡಾಕ್ಟರ್ ಮತ್ತು ಪ್ರದೀಪ್ ರಮಣ್‌ಲಾಲ್ ಮೋಧಿಯಾ ಅವರು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವುದು ಹಾಗೂ ಅವರಲ್ಲೊಬ್ಬರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿರುವುದನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅಕ್ಟೋಬರ್ 28ರಂದು ಈ ಮಧ್ಯಂತರ ಆದೇಶವನ್ನು ನೀಡಿದೆ. 2017ರ ಮೇ 4ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠ, “ಅರ್ಜಿದಾರರು 17 ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ ಹಾಗೂ ಒಬ್ಬರು ತೀವ್ರ ಅಂಗವೈಕಲ್ಯ ಹೊಂದಿದ್ದಾರೆ. ಮೇಲ್ಮನವಿಯಲ್ಲಿ ವಾಸ್ತವಾಂಶ ಮತ್ತು ಕಾನೂನಿನ ಕುರಿತು ನಿರ್ಧರಿಸಬೇಕಾದ ಅಂಶಗಳಿವೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಲಾಗುತ್ತಿದೆ” ಎಂದು ತಿಳಿಸಿದೆ.
ಅಪರಾಧಿಗಳ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿ, “ಅರ್ಜಿದಾರರು 17 ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಅಲ್ಲದೆ, ಪ್ರದೀಪ್ ಮೋಧಿಯಾ ಅವರ ಹೆಸರು ಆರಂಭಿಕ ಎಫ್‌ಐಆರ್‌ನಲ್ಲಿ ಇರಲಿಲ್ಲ. ಘಟನೆ ನಡೆದ ಸುಮಾರು ಮೂರು ವರ್ಷಗಳ ನಂತರ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಮತ್ತೊಬ್ಬ ಅಪರಾಧಿ ಜೋಶಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತೀವ್ರ ಅಂಗವೈಕಲ್ಯ ಹೊಂದಿದ್ದಾರೆ” ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಾ ಠಾಕ್ರೆ ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರಗಳ ಪರ ವಕೀಲರು, “ಇದೊಂದು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದ್ದು, ಕೆಳ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳು ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿಯೇ ಶಿಕ್ಷೆಯನ್ನು ಖಾಯಂಗೊಳಿಸಿವೆ” ಎಂದು ಜಾಮೀನು ನೀಡದಂತೆ ಕೋರಿದರು.
ಈ ಕುರಿತು ಮಾಧ್ಯಮಗಳಿಗೆ ಭಾವನಾತ್ಮಕ ಹೇಳಿಕೆ ಬಿಡುಗಡೆ ಮಾಡಿರುವ ಬಿಲ್ಕಿಸ್, ತಮಗೆ ಯಾವುದೇ ಮುನ್ಸೂಚನೆ ನೀಡದೆ ಅಥವಾ ತಮ್ಮ ಅಹವಾಲನ್ನು ಆಲಿಸದೆ ನ್ಯಾಯಾಲಯ ಈ ಆದೇಶ ಹೊರಡಿಸಿರುವುದನ್ನು ಪ್ರಶ್ನಿಸಿದ್ದಾರೆ. “ನೋವು, ಆಘಾತ ಮತ್ತು ನಂಬಿಕೆಯನ್ನ ಕಳೆದುಕೊಂಡು ನಾನು ಈ ಹೇಳಿಕೆ ನೀಡುತ್ತಿದ್ದೇನೆ. ನನ್ನನ್ನು ಕರೆಯದೆ ಮತ್ತು ನನ್ನ ಅಹವಾಲನ್ನು ಆಲಿಸದೆ, ಎರಡನೇ ಬಾರಿಗೆ ಸುಪ್ರೀಂ ಕೋರ್ಟ್ ಇಂತಹ ಆದೇಶವನ್ನು ನೀಡಿದೆ ಎಂಬುದನ್ನು ನಂಬಲಾಗುತ್ತಿಲ್ಲ. ಮಾಧ್ಯಮಗಳ ವರದಿಗಳ ಮೂಲಕ ನನಗೆ ಈ ವಿಷಯ ತಿಳಿಯಿತು” ಎಂದು ಬಿಲ್ಕಿಸ್ ನೋವು ತೋಡಿಕೊಂಡಿದ್ದಾರೆ. ನನಗೆ ಇಂತಹ ಕ್ರೂರ ಅನ್ಯಾಯ ಮಾಡಿದವರ ಶಿಕ್ಷೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಇಷ್ಟು ಸುಲಭವಾಗಿ ಹೇಗೆ ಅಮಾನತುಗೊಳಿಸಲು ಸಾಧ್ಯ? ಅವರು ನನಗೆ ಕನಿಷ್ಠ ಮಾಹಿತಿಯನ್ನೂ ಏಕೆ ನೀಡಲಿಲ್ಲ? ನ್ಯಾಯಾಲಯದ ಕೊಠಡಿಯಲ್ಲಿ ನನ್ನ ಧ್ವನಿಯನ್ನೂ ಆಲಿಸುವುದನ್ನು ಏಕೆ ಖಚಿತಪಡಿಸಿಕೊಳ್ಳಲಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.
“ಘಟನೆ ನಡೆದಾಗ ನಾನಿನ್ನೂ 19 ವರ್ಷದ ಯುವತಿ. ಕಳೆದ 24 ಸುದೀರ್ಘ ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಕುಟುಂಬ ಮತ್ತು ಸ್ನೇಹಿತರ ಪ್ರೀತಿಯಿಂದ ಬದುಕನ್ನು ಮತ್ತೆ ಕಟ್ಟಿಕೊಂಡು, ನಗುವುದನ್ನು ಕಲಿತಿದ್ದೆ. ಆದರೆ ಇಂದು, ಇಷ್ಟು ಕಷ್ಟಪಟ್ಟು ಗೆದ್ದಿದ್ದ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ನನಗಾಗಿ, ನನ್ನ ಕುಟುಂಬಕ್ಕಾಗಿ ಮತ್ತು ನನ್ನ ಮಕ್ಕಳಿಗಾಗಿ ಹಳೆಯ ಭಯಗಳು ಮತ್ತೆ ಕಾಡುತ್ತಿವೆ. ನ್ಯಾಯದ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಕಳೆದುಕೊಳ್ಳುವ ಭಯ ಎದುರಾಗಿದೆ” ಎಂದಿದ್ದಾರೆ.
“ನನ್ನ ಮಕ್ಕಳು ತಮ್ಮ ಜೀವನಪರ್ಯಂತ ಈ ಭಯದ ನೆರಳಿನಲ್ಲಿ ಬದುಕಲು ಅರ್ಹರಲ್ಲ. ಹಾಗಾಗಿ ನಾನು ಈ ಆದೇಶದ ವಿರುದ್ಧ ಹೋರಾಡುತ್ತೇನೆ. ಬದುಕಲು ಅರ್ಹಳಾಗಿದ್ದ ಮತ್ತು ನ್ಯಾಯಕ್ಕಾಗಿ ಹಂಬಲಿಸುತ್ತಿರುವ ನನ್ನ ಮೂರು ವರ್ಷದ ಮಗಳು ಸಲೇಹಾಳ ನೆನಪಿಗಾಗಿ ಹಾಗೂ ಎಲ್ಲೆಡೆಯ ಮಹಿಳೆಯರಿಗಾಗಿ ನನ್ನ ಹೋರಾಟ ಮುಂದುವರಿಯಲಿದೆ” ಎಂದು ಬಿಲ್ಕಿಸ್ ಬಾನೋ ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 27, 2002ರಂದು ಗೋಧ್ರಾ ರೈಲು ದಹನದ ನಂತರ ಗುಜರಾತ್‌ನಲ್ಲಿ ಗಲಭೆ ಭುಗಿಲೆದ್ದಿತ್ತು. ಫೆಬ್ರವರಿ 28ರಂದು ದಾಹೋದ್ ಜಿಲ್ಲೆಯ ರಾಂಧಿಕ್‌ಪುರ ಗ್ರಾಮದಲ್ಲಿ ಬೆಂಕಿ ಹಚ್ಚುವಿಕೆ ಮತ್ತು ಲೂಟಿ ನಡೆದಾಗ, ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ತಮ್ಮ ಕುಟುಂಬದೊಂದಿಗೆ ಗ್ರಾಮ ತೊರೆದಿದ್ದರು. ಮಾರ್ಚ್ 3ರಂದು ಪನ್ನಿವೇಲ್ ಬಳಿ ಸುಮಾರು 25 ಜನರ ಗುಂಪು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿತ್ತು. ಬಿಲ್ಕಿಸ್ ಅವರ ಮೂರೂವರೆ ವರ್ಷದ ಮಗಳನ್ನು ಕಸಿದು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಗಿತ್ತು. ಬಿಲ್ಕಿಸ್ ಮತ್ತು ಇತರ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಒಟ್ಟು 14 ಜನರನ್ನು ಹತ್ಯೆ ಮಾಡಲಾಗಿತ್ತು.
ಗುಜರಾತ್ ಪೊಲೀಸರು ಎಫ್‌ಐಆರ್‌ನಲ್ಲಿ ಅತ್ಯಾಚಾರದ ಉಲ್ಲೇಖ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ, 2004ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ, ವಿಚಾರಣೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿತ್ತು. 2008ರ ಜನವರಿ 21ರಂದು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017ರ ಮೇ 4ರಂದು ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
2022ರ ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರ ಈ 11 ಅಪರಾಧಿಗಳಿಗೆ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ನೀಡಿತ್ತು. ಆದರೆ, 2024ರ ಜನವರಿ 8ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಈ ಆದೇಶವನ್ನು ರದ್ದುಗೊಳಿಸಿ, ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಿತ್ತು.



