ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರ್ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ) ಪ್ರಮಾಣಪತ್ರ ನೀಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ, ಈ ಸಂಬಂಧ ಸರ್ಕಾರ ಕಾನೂನುಬಾಹಿರವಾಗಿ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ. ಮೀನುಗಾರ ಮೊಗೇರ್ ಸಮುದಾಯವು ಪ್ರವರ್ಗ-1ರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರುತ್ತದೆ ಎಂಬ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಅರ್ಹತೆ ಇಲ್ಲದವರಿಗೆ ಎಸ್‌ಸಿ ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಮೀನುಗಾರರಿಗೆ ಎಸ್‌ಸಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯಬಾರದು” ಎಂದು ಹೇಳಿದರು.
2023ರ ಸರಸ್ವತಿ ಮೊಗೇರ್ ಪ್ರಕರಣದ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಅವರು, ಉತ್ತರ ಕನ್ನಡದ ಕರಾವಳಿ ಮೀನುಗಾರ ಮೊಗೇರ್ ಸಮುದಾಯವು ಒಬಿಸಿ ಪ್ರವರ್ಗ-1ಕ್ಕೆ ಸೇರುತ್ತದೆ ಎಂಬ ಅಂಶವನ್ನು ಪ್ರಸ್ತಾಪಿಸಿದರು.
ಈ ವಿಚಾರದ ಬಗ್ಗೆ ಸಚಿವರು ಆರಂಭದಲ್ಲಿ ಪರಿಶೀಲನೆ ನಡೆಸುವುದಾಗಿ ತಿಳಿಸಿದಾಗ ಅಸಮಾಧಾನ ವ್ಯಕ್ತಪಡಿಸಿದ ಅರ್ಜುನ್ ಮಿಂಟಿ, ನೈಜ ಪರಿಶಿಷ್ಟ ಜಾತಿಯವರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು. “ಅರ್ಹತೆ ಇಲ್ಲದವರಿಗೆ ಎಸ್‌ಸಿ ಪ್ರಮಾಣಪತ್ರ ನೀಡುವುದಾದರೆ, ನಮಗೆ ವಿಷ ಕೊಟ್ಟು ಸಾಯಿಸಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳು ವೈದ್ಯ, “ಯಾರಿಗೂ ದಯಾಮರಣ ಬೇಡ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜುನ್ ಮಿಂಟಿ, ದಲಿತರ ಹಕ್ಕುಗಳ ಹೋರಾಟವನ್ನು ಉದಾಸೀನವಾಗಿ ಪರಿಗಣಿಸಲಾಗಿದೆ ಎಂದು ಆರೋಪಿಸಿ, ಮಂಕಾಳು ವೈದ್ಯ ಅವರು ನೈಜ ಪರಿಶಿಷ್ಟ ಜಾತಿಯವರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.
“ಶಿರಸಿ ಮತ್ತು ಸಿದ್ದಾಪುರ ಭಾಗಗಳಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಬ್ಯಾಂಕ್ ಹಾಗೂ ಸರ್ಕಾರಿ ಉದ್ಯೋಗ ಪಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಬೇಕು. ಅಂತಹ ಪ್ರಮಾಣಪತ್ರಗಳನ್ನು ಪಡೆದಿರುವುದು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡು, ಸಿಆರ್‌ಇ ಸೆಲ್ ಮೂಲಕ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದರು.
“ಮನವಿ ಸ್ವೀಕರಿಸಿದ ಸಚಿವ ಲಕ್ಷ್ಮಣ ಸವದಿ, ಇದು ಗಂಭೀರವಾದ ಸಾಂವಿಧಾನಿಕ ವಿಚಾರವಾಗಿದ್ದು, ಅರ್ಜುನ್ ಮಿಂಟಿ ಅವರು ಕಾನೂನಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು” ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಸರ್ಕಾರದ ಭರವಸೆಯ ಹೊರತಾಗಿಯೂ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಅಕ್ರಮವಾಗಿ ಎಸ್‌ಸಿ ಪ್ರಮಾಣಪತ್ರ ವಿತರಿಸಿದರೆ, ಭೀಮಘರ್ಜನೆ ಸಂಘಟನೆ ಹಾಗೂ ಜಿಲ್ಲೆಯ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಂದಾಯ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅರ್ಜುನ್ ಮಿಂಟಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮ್ ದೇಶಭಾಗ್ (ಗಾಂಧಿ), ಖಜಾಂಚಿ ನವೀನ್ ಕಾನಡೆ, ತಾಲೂಕು ಸಂಚಾಲಕ ಹರ್ಷ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



