ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಬರ ಪ್ರವಾಸ ಕೈಗೊಂಡಿದ್ದು, ರೈತ ಸಂಘದ ಸದಸ್ಯರು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹೂವಿನ ಹಡಗಲಿ ತಾಲೂಕು ಈ ವರ್ಷ ತೀವ್ರ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಹಾಗೂ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಸಾಮಾನ್ಯ ಮಳೆಯ ಶೇಕಡಾ 38.5% ಮಾತ್ರ ದಾಖಲಾಗಿದ್ದು, 61.5% ಮಳೆ ಕೊರತೆ ಉಂಟಾಗಿದೆ. ಜುಲೈ ತಿಂಗಳಲ್ಲಿ ಸಾಮಾನ್ಯ ಮಳೆಯ ಶೇಕಡಾ 38.9% ಮಾತ್ರ ದಾಖಲಾಗಿದ್ದು, 61.1% ಮಳೆ ಕೊರತೆ ಉಂಟಾಗಿದೆ.
ತಾಲೂಕಿನಲ್ಲಿ ಒಟ್ಟು 38,229 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಅದರಲ್ಲಿ ಸುಮಾರು 68% ಬೆಳೆ ನಷ್ಟ ಉಂಟಾಗಿದೆ. ಸುಮಾರು 32,632 ಎಕರೆ (52.51%) ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಪ್ರತಿ ವರ್ಷ ಸುಮಾರು 1,600ಕ್ಕೂ ಹೆಚ್ಚು ಜನರು ಉದ್ಯೋಗ ಅರಸಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ತಾಲೂಕಿನ 11 ಗ್ರಾಮಗಳಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಅಭಾವ ಎದುರಾಗಿದೆ.
ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಹೂವಿನಹಡಗಲಿ ತಾಲೂಕನ್ನು ತಕ್ಷಣವೇ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಪ್ರಮುಖ ಬೇಡಿಕೆಗಳು:
- ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆವಾರು ಪ್ರತಿ ಎಕರೆಗೆ ₹50,000 ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
- ಸಹಕಾರ ಸಂಘಗಳು ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕು. ಅಲ್ಲದೆ, ರೈತರಿಗೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನೀಡಲಾಗುತ್ತಿರುವ ನೋಟಿಸ್‌ಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು.
- ಕೃಷಿ ಚಟುವಟಿಕೆಗಳಿಗೆ ಪ್ರತಿದಿನ 12 ಗಂಟೆಗಳ ಕಾಲ ನಿರಂತರ 3-ಫೇಸ್ ವಿದ್ಯುತ್ ಪೂರೈಸಬೇಕು.
- ಈ ವರ್ಷದ ಬೆಳೆ ವಿಮೆಯಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸಿ, ಎಲ್ಲಾ ಬೆಳೆಗಳಿಗೆ ವಿಮಾ ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
- ಪ್ರತಿ ಹೋಬಳಿ ಮಟ್ಟದಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳನ್ನು ತಕ್ಷಣ ಆರಂಭಿಸಬೇಕು.
ರೈತರ ಮನವಿ ಪತ್ರ ಸ್ವೀಕರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರು ಸಿಎಂ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷರಾದ ಸಿದ್ದಪ್ಪ ಹೊಸಮನಿ, ಜಿಲ್ಲಾ ಗೌರವ ಅಧ್ಯಕ್ಷರಾದ ಬಾಣದ ಶಿವಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಕೆ. ಗನಿಸಾಬ್, ತಾಲೂಕು ಗೌರವ ಅಧ್ಯಕ್ಷರಾದ ಪಕ್ಕೀರಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ. ಹೊಳಗುಂದಿ, ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಟಿ. ಉಮೇಶ್ ಸೇರಿದಂತೆ ಇದ್ದರು.




