ಜಾನುವಾರಿಗಳಿಗಾಗಿ ಕೂಡಲೇ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ರೈತರು ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದೊಂದಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿ ಎದುರು ಧರಣಿ ನಡೆಸಿದರು.
ಹೂವಿನ ಹಡಗಲಿ ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆಯ ತೀವ್ರ ಅಭಾವ ಉಂಟಾಗಿದ್ದು, ರೈತಾಪಿ ವರ್ಗ ಸಂಪೂರ್ಣ ಕಂಗೆಟ್ಟುಹೋಗಿದೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗೆ ಸಜ್ಜಾಗಿದ್ದ ರೈತರಿಗೆ ಮಳೆಯ ಮುನಿಸು ದೊಡ್ಡ ಆಘಾತವನ್ನೇ ನೀಡಿದೆ. ಜುಲೈ ತಿಂಗಳು ಮುಗಿದರೂ ತಾಲೂಕಿನ ಅನೇಕ ಭಾಗಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಮಳೆಯನ್ನೇ ನೆಚ್ಚಿಕೊಂಡಿರುವ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಬಹುತೇಕ ಸ್ಥಗಿತಗೊಂಡಿದೆ. ಇನ್ನು ಕೆಲವು ಕಡೆ ಆಸೆಯಿಂದ ಬಿತ್ತನೆ ಮಾಡಿದ್ದ ಬೆಳೆಗಳೂ ಕೂಡ ಮಳೆ ಕೊರತೆಯಿಂದಾಗಿ ಕಣ್ಣೆದುರೇ ಒಣಗಿಹೋಗುತ್ತಿವೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
“ಜುಲೈ 3ರಂದು ಮಾನ್ಯ ಜನಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಇಲಾಖೆ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಕಾಯ್ದಿರಿಸಿಕೊಂಡು ಬಳಸುವ ಕ್ರಮ ವಹಿಸುಬೇಕೆಂದು ನಿರ್ದೇಶಿಸುತ್ತಾರೆ. ಕಾಲುವೆಗೆ/ಕೆರೆಗೆ ನೀರು ಹರಿಸಿ, ಮಳೆ ಇಲ್ಲದೆ ರೈತರ ಬಿತ್ತಿದ ಬೆಳಗಳು ಒಣಗುತ್ತವೆ ಎಂದು ರೈತ ಸಂಘದಿಂದ ಅಧಿಕಾರಿಗಳನ್ನು ಕೇಳಿದಾಗ ಸರಿಯಾಗಿ ಸ್ಪಂದಿಸಿಲ್ಲ. ಜುಲೈ 13ರಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಒಂದು ಸುತ್ತೋಲೆ ಬಂದಿದ್ದು, ನಾವು ಕಾಲುವೆಗಳಿಗೆ ನೀರು ಬಿಡುವುದಿಲ್ಲ. ಕುಡಿಯುವ ನೀರಿಗೆ ಆದ್ಯತೆ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ ಮಸಾಲವಾಡ ಗ್ರಾಮ ಪಂಚಾಯತಿಗೆ ಸೇರಿದ ಕೆ ಕೆ ತಾಂಡದಲ್ಲಿ ಜಾನುವಾರುಗಳಿಗೂ ನೀರಿನ ಅಭಾವ ಉಂಟಾಗಿದೆ. ರೈತರು ತಮ್ಮಊರಿನ ಕೆರೆಯಲ್ಲಿ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಹಾಕಿಸಿದರೂ ಒಂದು ಹನಿ ನೀರು ಬೀಳಲಿಲ್ಲ. ಆದಕಾರಣ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ನೀರಾವರಿ ಇಲಾಖೆಗೆ ಮನವಿ ಮಾಡಿದರೂ ಇವತ್ತಿಗೂ ಕೆರೆಗೆ ನೀರು ಹರಿಸುತ್ತಿಲ್ಲ. ಅಧಿಕಾರಿಗಳು ಸ್ವಂದಿಸದೇ ರೈತರನ್ನು ನಿರ್ಲಕ್ಷಿಸಿದ್ದಾರೆ. ದಯವಿಟ್ಟು ದನ ಕರುಗಳಿಗೆ ಕುಡಿಯುವ ನೀರಿಗಾದರೂ ಕೆರೆಗೆ ನೀರು ಹರಿಸಬೇಕು” ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿದ್ದೀರಾ? ʼಇಂಕ್ವಿಲಾಬ್ ಜಿ಼ಂದಾಬಾದ್ʼ ಎನ್ನುತ್ತಲೇ ಗಲ್ಲಿಗೇರಿದ ಪ್ರತೀಕಾರದ ಪ್ರತೀಕ ಶಹೀದ್ ಉಧಮ್ ಸಿಂಗ್ ಪುಣ್ಯಸ್ಮರಣೆ
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷರಾದ ಸಿದ್ದಪ್ಪ ಹೊಸಮನಿ ಹಾಗೂ ದೇವಪ್ಪ ಇಟ್ಟಿಗಿ, ಜಿಲ್ಲಾ ಮಹಿಳಾ ಅಧ್ಯಕ್ಷೆ B. H. M ವಿಜಯಲಕ್ಷ್ಮಿ , ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಕೆ., ರೈತ ಮಹಿಳೆ ರೇಖಾ, ಉಪಾಧ್ಯಕ್ಷ ವಿಠ್ಠಲ್ ನಾಯಕ, ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ ಹೊಳಗುಂದಿ, ಸಂಘಟನಾ ಕಾರ್ಯದರ್ಶಿ ಗಿರೀಶ ಸೇರಿದಂತೆ ಹಲವರು ಇದ್ದರು.




