ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 1ರಂದು ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯರು, ಸಂತ್ರಸ್ತ ಕುಟುಂಬಸ್ಥರು ಹಾಗೂ ಉನ್ನತ ಮಟ್ಟದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಬಸವಂತಪ್ಪ ಅವರನ್ನು ಭೇಟಿ ಮಾಡಿತು. ಖಲೀಲ್ ಅವರ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು. ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ತಾತ್ಕಾಲಿಕವಾಗಿ ಮೃತನ ಪತ್ನಿಗೆ ಯಾವುದಾದರೂ ಕೆಲಸ ನೀಡುವಂತೆ ಹೇಳಿದರು. ಮೃತನ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸುವಂತೆ ಸೂಚಿಸಿದರು.
ಲಾಕಪ್ ಡೆತ್ ಹೆಸರಿನಲ್ಲಿ ಬಲಿಯಾದ ಖಲೀಲ್ ರವರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾರಂಭದಿಂದಲೂ SDPI ಸಂತ್ರಸ್ತ ಕುಟುಂಬಸ್ಥರ ಪರ ನಿಂತಿದೆ. ಮೃತನ ಮನೆಗೆ ಭೇಟಿ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ, ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿತ್ತು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದು, ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಈ ಕೊಡಲೇ ಸರ್ಕಾರ ಸಂತ್ರಸ್ತ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡಬೇಕು ಎಂದು ಸಚಿವರ ಗಮನಕ್ಕೆ ವಿಷಯ ತಂದರು.
ಕೆಲ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸುವುದರಿಂದ ಮಾತ್ರ ನ್ಯಾಯ ದೊರಕುವುದಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ಸೇರಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರದ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು SDPI ಸದಸ್ಯರು ಒತ್ತಾಯಿಸಿದರು.
ಪ್ರಮುಖ ಬೇಡಿಕೆಗಳು:
- ಮೃತ ಖಲೀಲ್ ಅವರ ಮಕ್ಕಳ ಭವಿಷ್ಯಕ್ಕಾಗಿ ₹50 ಲಕ್ಷ ಪರಿಹಾರ ನೀಡಬೇಕು.
- ಮೃತರ ಪತ್ನಿ ಶೈನಾಜ್ ರವರಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು.
- ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
- ಮೃತರ ಕುಟುಂಬಕ್ಕೆ ಯಾವುದೇ ರೀತಿಯ ಒತ್ತಡ, ಬೆದರಿಕೆ ಅಥವಾ ಹಿಂಸೆ ಆಗದಂತೆ ಸೂಕ್ತ ರಕ್ಷಣೆ ನೀಡಬೇಕು.
- ಪ್ರಕರಣದ ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ಮೃತ ಖಲೀಲ್ ರವರ ಪತ್ನಿ ಶೈನಾಜ್, ಮಕ್ಕಳಾದ ಮಹಮ್ಮದ್ ಹಾಷೀಮ್ ಹಾಗೂ ಶಿಫಾ, ಸೋದರ ಮಾವ ಫಯಾಜ್ ಮೌಲಾನಾ, ಜಿಲ್ಲಾಧ್ಯಕ್ಷ ಸದ್ದಾಂ ಹಂಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಜಾಫರ್, ಕೆ. ಜಿಲಾನ್ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು.




