ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಹಣಕಾಸು ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಪ್ರಕರಣದ ತನಿಖೆಗೆ ವಿಶ್ವವಿದ್ಯಾಲಯವು ಸಮಿತಿಯನ್ನು ರಚಿಸಿದೆ.
2023-24, 2024-25 ಹಾಗೂ 2025-26 ಶೈಕ್ಷಣಿಕ ವರ್ಷಗಳಲ್ಲಿ ನಾಟಕ ಮತ್ತು ವಿವಿಧ ಸ್ನಾತಕೋತ್ತರ ವಿಭಾಗಗಳಿಗೆ ದಾಖಲಾದ ವಿದ್ಯಾರ್ಥಿನಿಯರು ಪಾವತಿಸಿದ ಶುಲ್ಕವನ್ನು ಕೆಲ ಸಿಬ್ಬಂದಿ ಬ್ಯಾಂಕ್ ಖಾತೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕೃತ್ಯದಲ್ಲಿ ವಿಶ್ವವಿದ್ಯಾಲಯದ ಕೆಲ ಸಿಬ್ಬಂದಿಯೂ ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರದ ಯುನಿಫೈಡ್ ಯೂನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್ (UCMS) ಮೂಲಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸುವ ವ್ಯವಸ್ಥೆ ಇದ್ದರೂ, ತಾಂತ್ರಿಕ ತೊಂದರೆ ಅಥವಾ ಅರಿವಿನ ಕೊರತೆಯಿಂದ ಆಫ್‌ಲೈನ್‌ನಲ್ಲಿ ಶುಲ್ಕ ಪಾವತಿಸಲು ಬಂದ ಪೋಷಕರಿಗೆ ನೆರವಾಗುವ ನೆಪದಲ್ಲಿ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.
ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಕೆಲ ವಿದ್ಯಾರ್ಥಿನಿಯರಿಗೆ ಇತರರ ಆನ್‌ಲೈನ್ ಪಾವತಿ ರಸೀದಿಗಳ ನಕಲು ಪ್ರತಿಗಳನ್ನು ನೀಡಿ, ಅದನ್ನೇ ವಿದ್ಯಾರ್ಥಿ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಮೂಲಕ ದಾಖಲಾತಿಯನ್ನು ಅಧಿಕೃತಗೊಳಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಅವ್ಯವಹಾರ ದೀರ್ಘಕಾಲ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಮಲ್ಲಮ್ಮ ಯಳವಾರ, “ಪ್ರಕರಣದ ಬಗ್ಗೆ ಉನ್ನತ ಮಟ್ಟದ, ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಸಮರ್ಪಕ ಸರ್ಕಾರಿ ಅನುದಾನದ ಕೊರತೆಯಿಂದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿನಿಯರ ಶುಲ್ಕವೇ ಪ್ರಮುಖ ಆದಾಯದ ಮೂಲವಾಗಿದೆ. ಇಂತಹ ಸಂದರ್ಭದಲ್ಲಿ ಶುಲ್ಕದ ಹಣದಲ್ಲೇ ಅವ್ಯವಹಾರ ನಡೆದಿರುವ ಆರೋಪ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಗೆ ಮತ್ತಷ್ಟು ಹೊಡೆತ ನೀಡಿದ್ದು, ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.




