ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು, ಅನಗತ್ಯ ದಾಖಲೆಗಳನ್ನು ಕಡ್ಡಾಯಗೊಳಿಸುವ ಮೂಲಕ ರೈತರು ಹಾಗೂ ಜನಸಾಮಾನ್ಯರನ್ನು ಯೋಜನೆಗಳಿಂದ ವಂಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾಧ್ಯಕ್ಷ ಉಮೇಶ ವಾಲಿಕಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ತಹಶೀಲ್ದಾರ್ ಕಚೇರಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ನೂರಾರು ಜನರು ಸರತಿ ಸಾಲಿನಲ್ಲಿ ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು, ಮಹಿಳೆಯರು ಹಾಗೂ ವಯೋವೃದ್ಧರು ಕಚೇರಿಯಲ್ಲೇ ಮುಕ್ಕಾಂ ಹೂಡಬೇಕಾದ ಸ್ಥಿತಿ ಎದುರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ” ಎಂದು ದೂರಿದರು.
“ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಿಸಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಸರಿಯಲ್ಲ. ಸರ್ಕಾರ ಮ್ಯಾಪಿಂಗ್ ಉದ್ದೇಶಕ್ಕಾಗಿ ಈ ದಾಖಲೆ ಕೇಳುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಅದರ ಅಗತ್ಯವೇನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಈ ಕ್ರಮದಿಂದ ಅನೇಕ ಬಡ ಕುಟುಂಬಗಳು ಪಡಿತರ ಪಡೆಯಲು ಪರದಾಡುವಂತಾಗಿದೆ” ಎಂದು ಆರೋಪಿಸಿದರು.
ಸರ್ಕಾರದ ತಪ್ಪು ನೀತಿಗಳಿಂದ ಜನರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಬರ ಪರಿಸ್ಥಿತಿಯಲ್ಲಿಯೂ ರೈತ ಕುಟುಂಬಗಳ ಮಹಿಳೆಯರು ಹಾಗೂ ವಯೋವೃದ್ಧರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಪ್ರಮಾಣ ಪತ್ರಕ್ಕಾಗಿ ಕಚೇರಿಗಳ ಮುಂದೆ ಕಾಯಬೇಕಾಗಿದೆ. ಅರ್ಜಿದಾರರ ಸಂಖ್ಯೆ ಹೆಚ್ಚಿರುವ ಕಾರಣ ಸಮಯಕ್ಕೆ ಪ್ರಮಾಣ ಪತ್ರ ಸಿಗದೆ ನಿರಾಶೆಯಿಂದ ಮನೆಗೆ ಮರಳುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ಸರ್ಕಾರ ತಕ್ಷಣವೇ ಈ ನಿಯಮಗಳನ್ನು ಮರುಪರಿಶೀಲಿಸಿ, ಜನಸಾಮಾನ್ಯರಿಗೆ ಅನಗತ್ಯ ತೊಂದರೆ ಉಂಟುಮಾಡುವ ಪ್ರಕ್ರಿಯೆಗಳನ್ನು ಸರಳೀಕರಿಸಬೇಕು. ಇಲ್ಲದಿದ್ದರೆ ರೈತ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಅರವಿಂದ ಕುಲಕರ್ಣಿ ಹಾಗೂ ಉಮೇಶ ವಾಲಿಕಾರ ಎಚ್ಚರಿಕೆ ನೀಡಿದರು.




