ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

Date:

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು ಕೋಮುವಾದಿ ಹತಾರನ್ನಾಗಿ ಬಳಸಿಕೊಳ್ಳುವ ಬಿಜೆಪಿಯ ಚಾಳಿಗೆ ಕೊನೆಯಿಲ್ಲ. ತಿ. ನರಸೀಪುರದ ಗಣೇಶೋತ್ಸವದ ಹೆಸರಿನಲ್ಲಿ ನಡೆದ ಗಲಭೆ ಹಾಗೂ ಪ್ರತಿಭಟನೆಗಳು ಇದಕ್ಕೆ ತಾಜಾ ನಿದರ್ಶನ. ಧರ್ಮದ ರಾಜಕಾರಣದ ಮೂಲಕ ಜನಸಾಮಾನ್ಯರ ದೈನಂದಿನ ನೆಮ್ಮದಿಗೂ ಕಲ್ಲು ಹಾಕುತ್ತಿರುವ ಬಿಜೆಪಿಯ ಈ ಕಪಟ ನಾಟಕವನ್ನು ನಾಡಿನ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಬೇಕಿದೆ.

- Advertisement -

ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ಗಣೇಶೋತ್ಸವದ ಮೆರವಣಿಗೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರು, ಮಸೀದಿಗಳ ಬಳಿ ತೆರಳುವಾಗ ಪಟಾಕಿ ಸಿಡಿಸುವುದು ಮತ್ತು ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಮಾಹಿತಿ ನೀಡಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದರು. ಇದನ್ನು ಹಿಂದೂ ಸಂಘಟಕರಿಗೆ ಬೆದರಿಕೆ ಹಾಕಲಾಗಿದೆ ಎಂದು ತಿರುಚಿ ಬಿಜೆಪಿ ನಾಯಕರು ಊಳಿಟ್ಟರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪೊಲೀಸ್ ಠಾಣೆ ಎದುರು ರಾತ್ರಿಯಿಡೀ ಪ್ರತಿಭಟನೆ ನಡೆಸಿ, ಇನ್ಸ್‌ಪೆಕ್ಟರ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು...

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ...

ʼಮಹಾಭಾರತʼಟಿವಿ ಧಾರಾವಾಹಿಗೆ ಅವಿಸ್ಮರಣೀಯ ಸಂಭಾಷಣೆ ಬರೆದಿದ್ದ ಈ ಮುಸ್ಲಿಂ...

ಇಂದು ಡಾ. ರಾಹೀ ಮಾಸೂಮ್ ರೇಜಾ ಅವರ ನೂರನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ನಾವು ಕೇವಲ ಒಬ್ಬ ಮಹಾನ್ ಲೇಖಕರನ್ನು ನೆನಪಿಸಿಕೊಳ್ಳುತ್ತಿಲ್ಲ; ಬದಲಿಗೆ ಭಾರತೀಯ ಸಮಾಜಕ್ಕೆ ಅತ್ಯಗತ್ಯವಾಗಿರುವ ಸಹಬಾಳ್ವೆಯ ಮೌಲ್ಯಗಳನ್ನು ಪುನರುಚ್ಚರಿಸಿಕೊಳ್ಳುತ್ತಿದ್ದೇವೆ. ಮಹಾಭಾರತ...

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ...

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ...

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಳೆದ ವರ್ಷದ ಸಾಂಪ್ರದಾಯಿಕ ಮಾರ್ಗಗಳಲ್ಲೇ ಈ ವರ್ಷವೂ ಮೆರವಣಿಗೆಗೆ ಅವಕಾಶವಿದ್ದು, ಯಾವುದೇ ಹೊಸ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದರೂ, ಬಿಜೆಪಿ ಮಾತ್ರ ಇದನ್ನು “ಹಿಂದೂ ವಿರೋಧಿ” ಸರ್ಕಾರದ ನೀತಿಯೆಂದು ಬಿಂಬಿಸಿ ಕೋಮು ಸೌಹಾರ್ದ ಕೆಡಿಸಲು ಯತ್ನಿಸಿತು.

ಕರ್ನಾಟಕದಲ್ಲಿ ಗಣೇಶೋತ್ಸವ, ದತ್ತಪೀಠ, ಟಿಪ್ಪು ಜಯಂತಿ, ಹಿಜಾಬ್‌ನಂತಹ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವ್ಯವಸ್ಥಿತವಾಗಿ ಕೋಮು ದ್ವೇಷ ಸೃಷ್ಟಿಸುತ್ತಾ ಬಂದಿದೆ. ಹಬ್ಬಗಳು ಜನರನ್ನು ಒಗ್ಗೂಡಿಸುವ ಸಾಮರಸ್ಯದ ಸೇತುವೆಗಳಾಗಬೇಕು. ಆದರೆ ಬಿಜೆಪಿ ನಾಯಕರಿಗೆ ಅವು ಸಮಾಜವನ್ನು ವಿಭಜಿಸುವ, ಎರಡು ಗುಂಪುಗಳ ನಡುವೆ ದ್ವೇಷದ ಕಿಡಿ ಹೊತ್ತಿಸುವ ರಾಜಕೀಯ ದಾಳಗಳಾಗಿ ಮಾತ್ರ ಕಾಣಿಸುತ್ತವೆ. ತಿ. ನರಸೀಪುರದಲ್ಲೂ ಕೂಡ ಬಿಜೆಪಿ ನಾಯಕರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಸೃಷ್ಟಿಸಿ ಪೊಲೀಸ್ ಠಾಣೆ ಎದುರು ರಾತ್ರಿಯಿಡೀ ಗಲಾಟೆ ಎಬ್ಬಿಸಿ, ಕಾನೂನನ್ನು ಕೈಗೆ ತೆಗೆದುಕೊಂಡು ದುರಹಂಕಾರ ಮೆರೆದರು.

ಚಿಕ್ಕಮಗಳೂರಿನ ದತ್ತಪೀಠವನ್ನು ದಕ್ಷಿಣ ಭಾರತದ ‘ಅಯೋಧ್ಯೆ’ಯನ್ನಾಗಿ ಬಿಂಬಿಸಲು ಸಂಘ ಪರಿವಾರ ಮತ್ತು ಬಿಜೆಪಿ ದಶಕಗಳಿಂದ ಯತ್ನಿಸುತ್ತಿವೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಶತಮಾನಗಳಿಂದ ಒಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದ ಸಾಂಪ್ರದಾಯಿಕ ಆಚರಣೆಗಳನ್ನು ಬದಿಗಿಟ್ಟು, ಇದನ್ನು ಸಂಪೂರ್ಣವಾಗಿ ಹಿಂದೂ ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಲು ಮತ್ತು ದತ್ತ ಜಯಂತಿಯ ಹೆಸರಿನಲ್ಲಿ ಪ್ರತಿವರ್ಷ ಕೋಮು ಉದ್ವಿಗ್ನತೆ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿಯ ಖಾಯಂ ತಂತ್ರವಾಗಿಬಿಟ್ಟಿದೆ.

2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಚರಣೆಯನ್ನು ಅಧಿಕೃತವಾಗಿ ಆಚರಿಸಲು ಮುಂದಾದಾಗ, ಬಿಜೆಪಿ ಇದನ್ನು ತೀವ್ರವಾಗಿ ವಿರೋಧಿಸಿತು. ಟಿಪ್ಪುವನ್ನು ಒಬ್ಬ ‘ದೇಶಪ್ರೇಮಿ ದೊರೆ’ಯಿಂದ ‘ಮತಾಂತರಗೊಳಿಸಿದ ಚಕ್ರವರ್ತಿ’ಯಂತೆ ಬಿಂಬಿಸಿ, ಹಿಂದೂ-ಮುಸ್ಲಿಂ ಭಾವನೆಗಳ ನಡುವೆ ದೊಡ್ಡ ಕಂದಕ ಸೃಷ್ಟಿಸಿತು. ಕೊಡಗು ಸೇರಿದಂತೆ ಕೆಲವು ಕಡೆಗಳಲ್ಲಿ ನಡೆದ ಸಂಘರ್ಷಗಳು ಹಾಗೂ ಗಲಭೆಗಳನ್ನು ಬಿಜೆಪಿ ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸಲು ಭರ್ಜರಿಯಾಗಿ ಬಳಸಿಕೊಂಡಿತು.

2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಸಾವೊಂದಕ್ಕೆ ರಾಜಕೀಯ ಹಾಗೂ ಕೋಮುವಾದಿ ಬಣ್ಣ ಬಳಿದು, ರಾಜ್ಯಾದ್ಯಂತ ಅಶಾಂತಿ ಮತ್ತು ದೊಡ್ಡ ಮಟ್ಟದ ಗಲಭೆಗಳಿಗೆ ಕಾರಣವಾಗುವಂತೆ ಬಿಂಬಿಸಲಾಗಿತ್ತು. ನಂತರ ತನಿಖೆಯಲ್ಲಿ ಅದು ಕೋಮು ಹತ್ಯೆಯಲ್ಲ ಎಂದು ಸ್ಪಷ್ಟವಾದರೂ, ಅಲ್ಲಿಯವರೆಗೆ ರಾಜಕೀಯ ಲಾಬಿಗಾಗಿ ಸಂಘಪರಿವಾರ ಹೆಣೆದಿದ್ದ ಧ್ರುವೀಕರಣ ತಂತ್ರ ಯಶಸ್ವಿಯಾಗಿ ಬಳಕೆಯಾಗಿತ್ತು.

ಇನ್ನು 2022ರಲ್ಲಿ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ಧರಿಸುವ ಸಣ್ಣ ವಿಷಯವನ್ನು ದೊಡ್ಡದಾಗಿ ಬಿಂಬಿಸಿ ರಾಜ್ಯಮಟ್ಟದ ಬಿಕ್ಕಟ್ಟನ್ನಾಗಿ ಪರಿವರ್ತಿಸುವಲ್ಲಿ ಬಿಜೆಪಿ ಮತ್ತು ಅದರ ಮಾತೃಸಂಸ್ಥೆಗಳು ಯಶಸ್ವಿಯಾದವು. ಶಾಲೆ-ಕಾಲೇಜುಗಳ ತರಗತಿಗಳ ಒಳಗೂ ಧರ್ಮದ ಗೋಡೆಗಳನ್ನು ನಿರ್ಮಿಸಿ ವಿದ್ಯಾರ್ಥಿಗಳನ್ನು ವಿಭಜಿಸಲಾಯಿತು. ಇದರ ಬೆನ್ನಲ್ಲೇ ಮುಸ್ಲಿಮರ ವ್ಯಾಪಾರ-ವಹಿವಾಟುಗಳನ್ನು ಗುರಿಯಾಗಿಸಿ ‘ಹಲಾಲ್ ಕಟ್’ ವಿವಾದವನ್ನು ಹುಟ್ಟುಹಾಕಿ, ಆರ್ಥಿಕ ಹಾಗೂ ಸಾಮಾಜಿಕ ಬಹಿಷ್ಕಾರದ ವಾತಾವರಣವನ್ನೂ ಸೃಷ್ಟಿಸಲಾಯಿತು.

ಸಾರ್ವಜನಿಕ ಮೈದಾನಗಳಲ್ಲಿ ಧಾರ್ಮಿಕ ಆಚರಣೆಗಳ ನಿಯಮಗಳನ್ನು ಮೀರಿ ಗಣೇಶೋತ್ಸವ ಅಥವಾ ಇತರೆ ಹಿಂದೂ ಹಬ್ಬಗಳನ್ನು ಆಚರಿಸಲು ಒತ್ತಡ ಹೇರುವುದು, ಸ್ಥಳೀಯ ಆಡಳಿತದೊಂದಿಗೆ ಉದ್ದೇಶಪೂರ್ವಕವಾಗಿ ಸಂಘರ್ಷಕ್ಕಿಳಿಯುವುದು ಮತ್ತು ಅದನ್ನು ರಾಷ್ಟ್ರೀಯವಾದ ವರ್ಸಸ್ ಮುಸ್ಲಿಮರ ಅತಿಪ್ರಸಂಗ ಎಂಬಂತೆ ಬಿಂಬಿಸಿ ಚುನಾವಣಾ ಧ್ರುವೀಕರಣ ಸಾಧಿಸುವುದು ಬಿಜೆಪಿಯ ಕುತಂತ್ರ. ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಸೃಷ್ಟಿಸಿದ್ದ ಈದ್ಗಾ ಮೈದಾನದ ವಿವಾದಗಳೂ ಇದೇ ಸಾಲಿಗೆ ಸೇರುತ್ತವೆ.

ಹಬ್ಬಗಳ ಆಚರಣೆಯ ಹಕ್ಕು ಯಾರೊಬ್ಬರ ರಾಜಕೀಯ ಸ್ವತ್ತೂ ಅಲ್ಲ. ಗಣೇಶೋತ್ಸವವಾಗಲಿ, ದತ್ತ ಜಯಂತಿಯಾಗಲಿ, ಈದ್‌ ಆಗಲಿ, ಕ್ರಿಸ್‌ಮಸ್‌ ಆಗಲಿ.. ಎಲ್ಲ ಧರ್ಮಗಳ ಆಚರಣೆಗಳಿಗೂ ಸಮಾನ ಗೌರವ ಮತ್ತು ಕಾನೂನುಬದ್ಧ ರಕ್ಷಣೆ ದೊರೆಯಬೇಕು. ಕೇವಲ ಅಧಿಕಾರ ಮತ್ತು ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳನ್ನು ಕೆರಳಿಸಿ, ಅಶಾಂತಿಯ ಬೆಂಕಿ ಹಚ್ಚುವ ಮೂಲಕ ಸಮಾಜದಲ್ಲಿ ಶಾಶ್ವತವಾದ ಧರ್ಮದ ಕಂದಕಗಳನ್ನು ಸೃಷ್ಟಿಸುತ್ತಿರುವ ಈ ವಿನಾಶಕಾರಿ ಧೋರಣೆಯನ್ನು ಪ್ರಶ್ನಿಸದೆ ಸುಮ್ಮನಿರುವುದು ಸಾಧ್ಯವಿಲ್ಲ.

ಇದನ್ನೂ ಓದಿ: ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?

ಹಬ್ಬಗಳು ಜನರನ್ನು ಒಗ್ಗೂಡಿಸುವ, ಪ್ರೀತಿ ಮತ್ತು ವಿಶ್ವಾಸವನ್ನು ಬಿತ್ತುವ ಪವಿತ್ರ ಸೇತುವೆಗಳಾಗಬೇಕೇ ಹೊರತು, ಸಮಾಜವನ್ನು ವಿಭಜಿಸುವ ದ್ವೇಷದ ಅಸ್ತ್ರಗಳಾಗಬಾರದು. ಆಡಳಿತ ಯಂತ್ರ ಹಾಗೂ ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ನಾಯಕರ ಒತ್ತಡಗಳಿಗೆ, ಬೆದರಿಕೆಗಳಿಗೆ ಅಥವಾ ಧಮಕಿಗಳಿಗೆ ಕಿಂಚಿತ್ತೂ ಮಣಿಯದೆ, ಕಾನೂನುಬಾಹಿರವಾಗಿ ಸಮಾಜದ ನೆಮ್ಮದಿ ಕೆಡಿಸುವ ಹಾಗೂ ಗಲಭೆ ಸೃಷ್ಟಿಸುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಬಾಳುತ್ತಿರುವ ಜನತೆಯ ನಡುವೆ ದ್ವೇಷದ ವಿಷಬೀಜ ಬಿತ್ತುವವರ ಕುತಂತ್ರಗಳನ್ನು ಮಟ್ಟಹಾಕಲು ಆಡಳಿತದ ದೃಢತೆಯಷ್ಟೇ ಜನತೆಯ ಎಚ್ಚರಿಕೆಯೂ ಮುಖ್ಯ. ಕರ್ನಾಟಕಕ್ಕೆ ಕೋಮು ಸೌಹಾರ್ದದ ಶ್ರೀಮಂತ ಪರಂಪರೆಯೇ ಉಂಟು. ಅದನ್ನು ಕಾಪಾಡಿಕೊಳ್ಳಲು ನಾಡಿನ ಪ್ರಜ್ಞಾವಂತ ಜನತೆ ಒಗ್ಗಟ್ಟಾಗಿ ನಿಲ್ಲಬೇಕಿದೆ. ಬಿಜೆಪಿಯ ಈ ಎಲ್ಲ ಕೋಮುವಾದಿ ಹುನ್ನಾರಗಳನ್ನು ಮತ್ತು ಸಂಕುಚಿತ ರಾಜಕೀಯ ಅಪಪ್ರಚಾರಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕಿದೆ

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ಗೆ 40 ಸಾವಿರ ಭಾರಿ ಬಾಂಬ್‌: ₹25 ಸಾವಿರ ಕೋಟಿ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಅಮೆರಿಕ ಸಿದ್ಧತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇಸ್ರೇಲ್‌ಗೆ $2.8 ಬಿಲಿಯನ್‌ (ಸುಮಾರು ₹25,000...

​’ಕೊನೆಯ ಗಳಿಗೆಯ ಪ್ರಯೋಗಗಳು ಅಪಾಯಕಾರಿ’: ಟೀಮ್ ಇಂಡಿಯಾಗೆ ಯುವರಾಜ್ ಸಿಂಗ್ ಸಲಹೆ

ಮುಂಬರುವ 2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್ ತಂಡದಲ್ಲಿ...

ಅರಬ್ಬಿ ಸಮುದ್ರದಲ್ಲಿ ಭಾರತ-ಪಾಕ್ ನೌಕಾಪಡೆ ನೌಕೆಗಳ ಡಿಕ್ಕಿ: ಪಾಕಿಸ್ತಾನ ನಡವಳಿಕೆಗೆ ವಿದೇಶಾಂಗ ಸಚಿವಾಲಯ ಆಕ್ಷೇಪ

ಅಂತಾರಾಷ್ಟ್ರೀಯ ಜಲಪ್ರದೇಶವಾದ ಉತ್ತರ ಅರಬ್ಬಿ ಸಮುದ್ರದಲ್ಲಿ ಗಸ್ತು ಕಾರ್ಯದಲ್ಲಿದ್ದ ಭಾರತೀಯ ನೌಕಾಪಡೆಯ...

ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ಪುತ್ರಿಗೆ ನಕಲಿ ದಾಖಲೆ ನೀಡಿದ್ದ ಕಂದಾಯ ಅಧಿಕಾರಿಯ ಜಾಮೀನು ಅರ್ಜಿ ವಜಾ

ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿಗೆ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ...