ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್ 2ರಂದು ವಿಜಯಪುರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ವಿಶೇಷ ಗ್ರಾಮಸಭೆಗಳ ಕುರಿತು ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕು, ಪಂಚಾಯಿತಿ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಜರಾಜಿ ದೃಢಪಡಿಸಬೇಕು ಎಂದು ಆಗ್ರಹಿಸಿ ಗ್ರಾಮ ಸ್ವರಾಜ್ಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪ್ರದೀಪ ಪಾಟೀಲ ನಾಗರದಿನ್ನಿ, ಕೊಲ್ಹಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗಾಂಧಿ ಜಯಂತಿಯಂದು ಸರ್ಕಾರದ ನಿರ್ದೇಶನದಂತೆ ವಿಶೇಷ ಗ್ರಾಮಸಭೆಗಳನ್ನು ನಡೆಸುವುದು ಗ್ರಾಮ ಸ್ವರಾಜ್ಯದ ಆಶಯವನ್ನು ಬಲಪಡಿಸುವ ಪ್ರಮುಖ ಕ್ರಮವಾಗಿದೆ. ಆದರೆ ಗ್ರಾಮಸಭೆ ನಡೆದಿರುವ ಬಗ್ಗೆ, ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಹಾಜರಾತಿ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ, ಗ್ರಾಮಸಭೆಗೆ ಹಾಜರಾಗಿದ್ದಾರೆಯೇ ಎಂಬುದರ ಕುರಿತು ದೃಢೀಕೃತ ಮಾಹಿತಿ ನೀಡಬೇಕು. ಗ್ರಾಮಸಭೆಯ ನಿರ್ಣಯಗಳು ಕೇವಲ ದಾಖಲೆಗಳಲ್ಲಿ ಉಳಿಯದೆ, ಅವುಗಳ ಅನುಷ್ಠಾನದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಇರಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮಸಭೆ ಎಂಬುದು ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆಗಳನ್ನು ನೇರವಾಗಿ ಆಡಳಿತದ ಮುಂದಿಡುವ ಪ್ರಜಾಪ್ರಭುತ್ವದ ವೇದಿಕೆಯಾಗಿದೆ. ಹೀಗಾಗಿ ಗ್ರಾಮಸಭೆಯ ಮಾಹಿತಿ ಮುಚ್ಚಿಡದೆ ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಪ್ರದೀಪ ಪಾಟೀಲ ನಾಗರದಿನ್ನಿ ಮನವಿ ಮಾಡಿದ್ದಾರೆ.
ಅಕ್ಟೋಬರ್ 2ರಂದು ನಡೆದ ವಿಶೇಷ ಗ್ರಾಮಸಭೆಗಳ ದಿನಾಂಕ, ಸ್ಥಳ, ಹಾಜರಾತಿ, ಚರ್ಚಿಸಲಾದ ವಿಷಯಗಳು, ಕೈಗೊಂಡ ನಿರ್ಣಯಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಹಾಜರಾತಿ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.




