ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಹಳ್ಳಿಗಳ ರೈತರಿಗೆ ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಪರಿಹಾರ ದೊರೆತಿಲ್ಲ. 2025- 26 ನೇ ಸಾಲಿನ ಫಸಲ್ ಭೀಮಾ ಯೋಜನೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ಪಾರದರ್ಶಕ ತನಿಖೆ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ್ ನಡಹಳ್ಳಿ ಆಗ್ರಹಿಸಿದರು.
ತಾಳಿಕೋಟೆ ಪಟ್ಟಣದಲ್ಲಿ ಫಸಲ್ ಭೀಮಾ ಸಮರ್ಪಕ ಅನುಷ್ಠಾನ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕ ಮೂಕಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ರೈತರ ಸಮಸ್ಯೆಗಳನ್ನು ನಿಗದಿತ ಸಮಯದಲ್ಲಿ ಪರಿಹರಿಸದೆ ಹೋದರೆ ಇದಕ್ಕಿಂತಲೂ ಉಗ್ರ ಹೋರಾಟ ನಡೆಸಲಾಗುತ್ತದೆ” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪಿಡಿಓ ಹಾಗೂ ಕೃಷಿ ಇಲಾಖೆಯ ಜಿಲ್ಲಾಧಿಕಾರಿ ಫಸಲ್ ಭೀಮಾ ಯೋಜನೆ ಕುರಿತು ಸಾಕಷ್ಟು ವಿವರಣೆ ನೀಡಿದರು ರೈತರಿಗೆ ಸಹಮತವಾಗಲಿಲ್ಲ. ಒಂದು ಹಂತದಲ್ಲಿ ಸಭೆಯಲ್ಲಿ ಗದ್ದಲ ಏರ್ಪಟ್ಟಾಗ ಸಿಪಿಐ ಮೊಹಮ್ಮದ್ ಫಸಿವುದ್ದೀನ್ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಸಭೆಯ ಕೊನೆಯಲ್ಲಿ ತಾಳಿಕೋಟೆ ತಹಶೀಲ್ದಾರ್ ಡಾಕ್ಟರ್ ವಿನಯ್ ಹೂಗಾರ್ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಒಂದು ತಿಂಗಳ ಅವಧಿಯ ಒಳಗಾಗಿ ಪರಿಹಾರ ನೀಡಲಾಗುವುದು. ಪ್ರತಿಭಟನೆ ನಿಲ್ಲಿಸಬೇಕೆಂದು ಮನವಿ ಮಾಡಲು ಸ್ಪಂದಿಸಿದ ರೈತ ಮುಖಂಡರು ಪ್ರತಿಭಟನೆಯನ್ನು ನಿಲ್ಲಿಸಿದರು.
ಪ್ರತಿಭಟನೆಯಲ್ಲಿ ಶ್ರೀಶೈಲ ವಾಲಿಕಾರ್, ದೇವರಾಜ ನಾಗೂರ, ಸಂಗಣ್ಣ ಬಿರಾದಾರ, ಮಲ್ಲಯ್ಯ ಹಿರೇಮಠ, ನಾಗೇಶ ಕಲ್ಲದೇವನಹಳ್ಳಿ, ಶಿವರಾಜ ಗುಗ್ಗಳ್ಳಿ, ಸಾಹೇಬ ಪಟೇಲ್ ಮೊಕಾಶಿ ಇದ್ದರು.




