2026ನೇ ಸಾಲಿನ ವಿವಿಧ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸಿರುವ ವಿಜಯಪುರದ ಬಿಎಲ್‌ಡಿಇ (ಡೀಮ್ಡ್ ವಿಶ್ವವಿದ್ಯಾಲಯ) ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಬೋಧನೆ ಮತ್ತು ಕಲಿಕೆ, ಸಂಶೋಧನೆ ಹಾಗೂ ನಾವೀನ್ಯತೆ, ಆರೋಗ್ಯ ಸೇವೆ, ಕ್ಲಿನಿಕಲ್ ತರಬೇತಿ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆಗೆ ಈ ಶ್ರೇಯಾಂಕಗಳು ಸಾಕ್ಷಿಯಾಗಿವೆ.
2026ರ ಇಂಡಿಯಾ ಟುಡೇ–ಎಂ.ಡಿ.ಆರ್.ಎ ಶ್ರೇಯಾಂಕದಲ್ಲಿ ಬಿಎಲ್‌ಡಿಇ ವಿಶ್ವವಿದ್ಯಾಲಯ 15ನೇ ಸ್ಥಾನ, ಔಟ್‌ಲುಕ್–ಐಕೇರ್ ಶ್ರೇಯಾಂಕದಲ್ಲಿ 10ನೇ ಸ್ಥಾನ ಹಾಗೂ ದಿ ವೀಕ್–ಹನ್ಸಾ ಶ್ರೇಯಾಂಕದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.
ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಕೂಡ ಉತ್ತಮ ಸಾಧನೆ ಮಾಡಿದ್ದು, ಔಟ್‌ಲುಕ್–ಐಕೇರ್ ಶ್ರೇಯಾಂಕದಲ್ಲಿ 9ನೇ ಸ್ಥಾನ ಹಾಗೂ ದಿ ವೀಕ್–ಹನ್ಸಾ ಶ್ರೇಯಾಂಕದಲ್ಲಿ 17ನೇ ಸ್ಥಾನ ಗಳಿಸಿದೆ. ಈ ಮೂಲಕ ದೇಶದ ಪ್ರಮುಖ ಖಾಸಗಿ ವೈದ್ಯಕೀಯ ಕಾಲೇಜುಗಳ ಸಾಲಿನಲ್ಲಿ ತನ್ನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದೆ.
ಅದೇ ರೀತಿ, ಔಟ್‌ಲುಕ್–ಐಕೇರ್ ರಾಷ್ಟ್ರೀಯ ಶ್ರೇಯಾಂಕದಲ್ಲಿ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ ಭಾರತದ ಅಗ್ರ 20 ಕಾಲೇಜುಗಳ ಪೈಕಿ 4ನೇ ಸ್ಥಾನ ಪಡೆದಿದೆ.ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜು ಅಗ್ರ 20 ಕಾಲೇಜುಗಳಲ್ಲಿ 2ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
IIRF ಶ್ರೇಯಾಂಕದಲ್ಲೂ ಉತ್ತಮ ಸ್ಥಾನ
ಐಐಆರ್‌ಎಫ್–2026 ಶ್ರೇಯಾಂಕದಲ್ಲಿಯೂ ಬಿಎಲ್‌ಡಿಇ ವಿಶ್ವವಿದ್ಯಾಲಯ ಉತ್ತಮ ಸಾಧನೆ ದಾಖಲಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ 65ನೇ ಸ್ಥಾನ, ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ 45ನೇ ಸ್ಥಾನ ಹಾಗೂ ಕರ್ನಾಟಕದಲ್ಲಿ 7ನೇ ಸ್ಥಾನ ಗಳಿಸಿದೆ.
ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 115ನೇ ಸ್ಥಾನ, ಕರ್ನಾಟಕದಲ್ಲಿ 29ನೇ ಸ್ಥಾನ ಹಾಗೂ ದಕ್ಷಿಣ ಭಾರತದಲ್ಲಿ 70ನೇ ಸ್ಥಾನ ಪಡೆದಿದೆ. ಬಿ.ಎಂ. ಪಾಟೀಲ ನರ್ಸಿಂಗ್ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 50ನೇ ಸ್ಥಾನ, ರಾಜ್ಯದಲ್ಲಿ 11ನೇ ಸ್ಥಾನ ಹಾಗೂ ದಕ್ಷಿಣ ಭಾರತದಲ್ಲಿ 30ನೇ ಸ್ಥಾನ ಗಳಿಸಿದೆ.
ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕದಲ್ಲೂ ಮಿಂಚು
2026ರ ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಬಿಎಲ್‌ಡಿಇ ಡೀಮ್ಡ್ ವಿವಿ 7ನೇ ಸ್ಥಾನ ಪಡೆದುಕೊಂಡಿದ್ದು, 100ರಲ್ಲಿ 93.6 ಅಂಕ ಗಳಿಸಿ ಪ್ರತಿಷ್ಠಿತ ಗೋಲ್ಡ್ ರೇಟಿಂಗ್ ತನ್ನದಾಗಿಸಿಕೊಂಡಿದೆ.
ಪರಿಸರ ಸಂರಕ್ಷಣೆ, ಹಸಿರು ಕ್ಯಾಂಪಸ್ ಅಭಿವೃದ್ಧಿ, ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಹಾಗೂ ಸುಸ್ಥಿರ ಸಾಂಸ್ಥಿಕ ಕಾರ್ಯವೈಖರಿಗೆ ವಿಶ್ವವಿದ್ಯಾಲಯ ನೀಡುತ್ತಿರುವ ಆದ್ಯತೆಯನ್ನು ಈ ಮಾನ್ಯತೆ ಪ್ರತಿಬಿಂಬಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಲೇಔಟ್ ಅನುಮೋದನೆಗೆ ಲಂಚಕ್ಕೆ ಬೇಡಿಕೆ: ಪ.ಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅಮಾನತು
ರಾಷ್ಟ್ರೀಯ ಮಟ್ಟದ ವಿವಿಧ ಶ್ರೇಯಾಂಕಗಳಲ್ಲಿ ವಿಶ್ವವಿದ್ಯಾಲಯ ಹಾಗೂ ಅದರ ವಿವಿಧ ಶಿಕ್ಷಣ ಸಂಸ್ಥೆಗಳು ದಾಖಲಿಸಿರುವ ಈ ಸಾಧನೆಗಳು ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ, ನಾವೀನ್ಯತೆ, ಸುಸ್ಥಿರತೆ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಶ್ರೇಷ್ಠತೆಯತ್ತ ಸಾಗುತ್ತಿರುವುದನ್ನು ತೋರಿಸಿವೆ. ಈ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಬಹುಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಬಿಎಲ್‌ಡಿಇ ವಿಶ್ವವಿದ್ಯಾಲಯದ ಸ್ಥಾನ ಮತ್ತಷ್ಟು ಬಲಗೊಂಡಿದೆ.
ಈ ಸಾಧನೆಗೆ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ಸುನೀಲಗೌಡ ಬಿ. ಪಾಟೀಲ ಮತ್ತು ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ. ಪಾಟೀಲ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.




