ವಿಜಯಪುರ ಜಿಲ್ಲೆಯಲ್ಲಿನ ಹಳೆಯ ಮನೆಗಳ ಚಾವಣಿ ಕುಸಿತದ ಸರಣಿ ಘಟನೆಗಳು ಜನರಲ್ಲಿ ಆತಂಕ ಮೂಡಿಸಿದ್ದು, ಅರ್ಹರಿಗೆ ತುರ್ತು ವಸತಿ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸ್ವರಾಜ್ಯ ಸೇನೆ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಮೋರಟಗಿ ಗ್ರಾಮದಲ್ಲಿ ವಾರದ ಹಿಂದೆ ಬಾಡಿಗೆ ಮನೆಯ ಚಾವಣಿ ಕುಸಿದು ನಾಲ್ವರು ಮೃತಪಟ್ಟಿದ್ದರು. ಬುಧವಾರ ನಿಡಗುಂದಿ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಹಳೆಯ ಮನೆಯ ಚಾವಣಿ ಕುಸಿದು ಮಹಾದೇವಿ ವಾರದ (55) ಮೃತಪಟ್ಟಿದ್ದಾರೆ. ಪತಿ ಶಿವಾನಂದ ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆಯನ್ನು ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
“ಈ ದುರಂತಗಳು ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರ ವಸತಿ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ ಮೂಡಿಸಿವೆ. ಆರ್ಥಿಕ ಸಂಕಷ್ಟದಿಂದ ಹೊಸ ಮನೆ ಕಟ್ಟಲು ಸಾಧ್ಯವಾಗದೇ, ಶಿಥಿಲಾವಸ್ಥೆಯ ಅಪಾಯಕಾರಿ ಮನೆಗಳಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿವೆ. ಜಿಲ್ಲೆಯಾದ್ಯಂತ ಇಂತಹ ಮನೆಗಳ ಸಮೀಕ್ಷೆ ನಡೆಸಿ, ಶಿಥಿಲಾವಸ್ಥೆಯ ಮನೆಗಳ ಪಟ್ಟಿ ಸಿದ್ದಪಡಿಸಿ, ತುರ್ತು ಕ್ರಮ ಕೈಗೊಳ್ಳಬೇಕು. ವಿಶೇಷ ಪ್ಯಾಕೇಜ್ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಮನೆಗಳ ಮಂಜೂರಾತಿಗೆ ಅನುಮತಿಸಬೇಕು” ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗೌಡಪ್ಪ ಬಡಿಗೇರ, ಅಮೃತ್ ಮಾವಿನಹಳ್ಳಿ, ಪರಶುರಾಮ ಕರವಿನಾಳ, ತಿಪ್ಪಣ್ಣಡಿ, ಮಹೆಬೂಬ ಮುಜಾವರ, ಅರುಢ ಸ್ವಾಮಿ ಕಬಾಡೆ, ಗುರುಪಾದ ಬಿರಾದಾರ, ಸುಭಾಷ ಪಾಂಡ್ರೆ, ಪ್ರಶಾಂತ ಗದ್ದರಗಿ, ಪ್ರಕಾಶ ಶಬರದ, ಪ್ರಭು ಸಿಂಧೆ ಇದ್ದರು.




