ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಇಂಧನ ಬಳಕೆಯನ್ನು ಕಡಿಮೆಗೊಳಿಸುವಂತೆ ಪ್ರಧಾನಿ ಮೋದಿ ಕೊಟ್ಟಿರುವ ಕರೆಗೆ ನಟ, ರಾಜ್ಯಸಭಾ ಸಂಸದ ಕಮಲ್ ಹಾಸನ್ ಬೆಂಬಲ ನೀಡಿದ್ದಾರೆ. 1960ರ ದಶಕದಲ್ಲಿ ಭಾರತವು ಮಾಡಿದ ತ್ಯಾಗಗಳ ಬಗ್ಗೆ ಮಾತನಾಡಿರುವ ಅವರು, ‘ಅಂದಿನ ಪರಿಸ್ಥಿತಿಗೆ ಹೋಲಿಸಿದರೆ ಮೋದಿ ಅವರ ನಿರ್ದೇಶನವು ಸಾಕಷ್ಟು ಕಾರ್ಯಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ “ಭಾರತವು ಈ ಹಿಂದೆ ಯುದ್ಧಗಳು, ಕೊರತೆಗಳು ಹಾಗೂ ಜಾಗತಿಕ ಬಿಕ್ಕಟ್ಟುಗಳನ್ನು ಒಗ್ಗಟ್ಟು ಮತ್ತು ಸಾಮೂಹಿಕ ತ್ಯಾಗದ ಮೂಲಕ ಜಯಿಸಿದೆ. ಈ ಕ್ಷಣವು ಮತ್ತೊಮ್ಮೆ ಅಂತಹದ್ದೇ ರಾಷ್ಟ್ರೀಯ ಮನೋಭಾವವನ್ನು ಬಯಸುತ್ತಿದೆ” ಎಂದು ಶೀರ್ಷಿಕೆ ನೀಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಅವರು “ಇಂದು, ಇರಾನ್ ಯುದ್ಧದ ಪ್ರಭಾವದಿಂದ ತೀವ್ರವಾಗಿ ಕಳವಳಗೊಂಡಿರುವ ಒಬ್ಬ ಭಾರತೀಯನಾಗಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ತೈಲ ಬೆಲೆಗಳು ಏರುತ್ತಿವೆ. ಸಮುದ್ರದ ವ್ಯಾಪಾರ ಮಾರ್ಗಗಳನ್ನು ನಿರ್ಬಂಧಿಸಲಾಗಿದೆ. ನಮ್ಮ ಅಡುಗೆಮನೆ ಶಕ್ತಿ ನೀಡುವ ಇಂಧನ, ನಮ್ಮ ಹೊಲಗಳು ಮತ್ತು ಬೆಳೆಗಳಿಗೆ ಗೊಬ್ಬರ ಮತ್ತು ಪೋಷಣೆ ನೀಡುವ ಇಂಧನ, ನಮ್ಮ ಕೈಗಾರಿಕೆಗಳು ಮತ್ತು ವಾಹನಗಳನ್ನು ಓಡಿಸುವ ಇಂಧನ – ಇವೆಲ್ಲವೂ ಹೆಚ್ಚು ದುಬಾರಿಯಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಈಗಾಗಲೇ 60ಕ್ಕೂ ಹೆಚ್ಚು ದೇಶಗಳು ಇಂಧನ ಉಳಿತಾಯ ನಿಯಮಗಳನ್ನು ಜಾರಿಗೊಳಿಸಿವೆ. ಇತ್ತೀಚೆಗೆ ಸಿಂಗಾಪುರದ ಪ್ರಧಾನ ಮಂತ್ರಿಗಳು ತಮ್ಮ ಜನರಿಗೆ ಮುಂದಿನ ಕಠಿಣ ದಿನಗಳಿಗಾಗಿ ಸಿದ್ಧರಾಗಲು ಕೇಳಿಕೊಂಡಿದ್ದನ್ನು ನಾವು ಕೇಳಿದ್ದೇವೆ. ನಾವು ಅವರಿಗಿಂತ ದೊಡ್ಡ ದೇಶ” ಎಂದು ಹೇಳಿದ್ದಾರೆ.
India has overcome wars, shortages, and global crises before – through unity and shared sacrifice. This moment calls for the same national spirit again. 🇮🇳 pic.twitter.com/Mi56m0I4pD
— Kamal Haasan (@ikamalhaasan) May 22, 2026
ರಾಜಕೀಯವನ್ನು ಮೀರಿ ದೇಶಕ್ಕೆ ಸಹಾಯ ಮಾಡಬೇಕಾದ ಸಮಯ ಎಂದಿರುವ ಕಮಲ್, “ಇಂತಹ ಕ್ಷಣಗಳಲ್ಲಿ, ರಾಷ್ಟ್ರೀಯ ಜವಾಬ್ದಾರಿಯು ಪಕ್ಷದ ರಾಜಕೀಯಕ್ಕಿಂತ ಮಿಗಿಲಾಗಿರಬೇಕು. ವಾಜಪೇಯಿ ಅವರು ಹೇಳಿದಂತೆ, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ದೇಶವು ಉಳಿಯುತ್ತದೆ. 1962ರ ಚೀನಾ ಯುದ್ಧದ ಸಮಯದಲ್ಲಿ, ಗಡಿಯಲ್ಲಿ ಹೋರಾಡುತ್ತಿದ್ದ ನಮ್ಮ ಸೈನಿಕರನ್ನು ಬೆಂಬಲಿಸಲು ನಾವು ನಮ್ಮ ಮನೆಗಳಿಂದ ಚಿನ್ನವನ್ನು ದಾನ ಮಾಡಿದ್ದೆವು. 1965ರಲ್ಲಿ, ಭಾರತದಲ್ಲಿ ಸಾಕಷ್ಟು ಆಹಾರ ಧಾನ್ಯಗಳಿಲ್ಲದಿದ್ದಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಇಡೀ ದೇಶಕ್ಕಾಗಿ ವಾರದಲ್ಲಿ ಒಂದು ಹೊತ್ತಿನ ಊಟವನ್ನು ಬಿಡುವಂತೆ ನಾಗರಿಕರಲ್ಲಿ ಕೇಳಿಕೊಂಡಿದ್ದರು. ಇಂದು ಭಾರತಕ್ಕೆ ಅಂತಹ ತ್ಯಾಗದ ಅಗತ್ಯವಿಲ್ಲ. ನಮ್ಮ ಪೋಷಕರು ಇದಕ್ಕಿಂತ ಹೆಚ್ಚಿನದನ್ನು ಮಾಡಿರುವಾಗ, ಖಂಡಿತವಾಗಿಯೂ ನಾವು ನಮ್ಮ ದೇಶಕ್ಕಾಗಿ ಇಷ್ಟನ್ನಾದರೂ (ಇಂಧನ ಉಳಿತಾಯ) ಮಾಡಲೇಬೇಕು” ಎಂದಿದ್ದಾರೆ.
“ನೆನಪಿಡಿ, ಇಂದು ಉಳಿಸುವ ಪ್ರತಿಯೊಂದು ಯೂನಿಟ್ ಇಂಧನವೂ ನಾಳೆಯ ಭಾರತವನ್ನು ಬಲಪಡಿಸುತ್ತದೆ. ಉಳಿಸುವ ಪ್ರತಿಯೊಂದು ಹನಿ ತೈಲವೂ ಅತ್ಯಂತ ಬಡ ಭಾರತೀಯನನ್ನು ಹಣದುಬ್ಬರದಿಂದ ರಕ್ಷಿಸುತ್ತದೆ. ಭೌಗೋಳಿಕ ರಾಜಕೀಯವು ರಸ್ತೆಯಲ್ಲಿ ನಡೆಯುವ ಪಾದಚಾರಿಯ ಮೇಲೂ ಅಷ್ಟೇ ಪರಿಣಾಮ ಬೀರುತ್ತದೆ. ಆಕಾಶದಲ್ಲಿ ಹಾರುವ ಶ್ರೀಮಂತರ ಮೇಲೂ ಅಷ್ಟೇ ಪರಿಣಾಮ ಬೀರುತ್ತದೆ. ಆದರೆ, ನಾವು ಈ ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸಿದರೆ, ಭಾರತವು ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಲು ಸಾಧ್ಯ” ಎಂದು ಅವರು ಪ್ರತಿಪಾದಿಸಿದ್ದಾರೆ.



