ವಿಜಯಪುರ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಯಶಸ್ವಿಯಾಗಿ ಸಾಗುತ್ತಿದ್ದು, ಮನೆ-ಮನೆ ಗಣತಿ ಹಾಗೂ ಡಿಜಿಟಲೀಕರಣ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ್ ಕೆ ತಿಳಿಸಿದ್ದಾರೆ.
ಜೂನ್ 16ರ ವೇಳೆಗೆ ಜಿಲ್ಲೆಯ ಒಟ್ಟು 19,82,114 ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎಲ್ಲ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಜೂನ್ 30ರಿಂದ ಆಗಸ್ಟ್ 8ರವರೆಗೆ ಮನೆ-ಮನೆ ಗಣತಿ ಹಾಗೂ ಡಿಜಿಟಲೀಕರಣ ಕಾರ್ಯ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 19,56,572 ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಅವುಗಳಲ್ಲಿ 13,38,419 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಅಲ್ಲದೆ 3,767 ಮತದಾರರು ಆನ್‌ಲೈನ್ ಮೂಲಕವೇ ತಮ್ಮ ನಮೂನೆಗಳನ್ನು ಸಲ್ಲಿಸಿ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಿದ್ದಾರೆ.
ಪರಿಷ್ಕರಣೆ ವೇಳೆ 22,632 ಮೃತ ಮತದಾರರನ್ನು ಹಾಗೂ 26,998 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಲಾಗಿದೆ. ಇದೇ ವೇಳೆ 8,490 ಹೊಸ ಮತದಾರರು ನೋಂದಣಿಯಾಗಿದ್ದು, 673 ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇನ್ನು 281 ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಶೇ. 100ರಷ್ಟು ಪೂರ್ಣಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಎಲ್ಲ ಮತದಾರರು ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಮನವಿ ಮಾಡಿದ್ದಾರೆ.





