ಅಂಬೇಡ್ಕರ್ ಅವರು ಕೇವಲ ಸಂವಿಧಾನದ ಶಿಲ್ಪಿಯಷ್ಟೇ ಅಲ್ಲ, ಮಹಾನ್ ಚಿಂತಕರಾದ ಅವರು ಹಿಂದುಳಿದವರ ಧ್ವನಿಯಾಗಿದ್ದರು. ʼಶಿಕ್ಷಣ, ಸಂಘಟನೆ, ಹೋರಾಟʼದ ಮೂಲಕ ಏನನ್ನಾದರು ಸಾಧಿಸಲು ಸಾಧ್ಯ. ಆದರೆ, ಮೂಢ ನಂಬಿಕೆಯಿಂದ ದೂರ ಉಳಿಯಬೇಕು ಎಂಬ ಸಂದೇಶವು ಇಂದಿನ ಯುವಜನತೆಯ ಧ್ಯೇಯವಾಗಬೇಕು ಎಂದು ಕರ್ನಾಟಕ ರಾಜ್ಯ ಬಿಎಸ್ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ದಸ್ತಗೀರ್ ಬಾಬ ಮುಲ್ಲ ಅಭಿಪ್ರಾಯಪಟ್ಟರು.
ವಿಜಯಪುರದಲ್ಲಿ ಇಂದು ಸಂಗಮ ಸಂಸ್ಥೆಯ ವತಿಯಿಂದ ಡಾ ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ವಿಚಾರಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ಅಂಬೇಡ್ಕರ್ ಅವರ ಹೋರಾಟಗಳನ್ನು ಸ್ಮರಿಸಿ, ಸಮಾಜದಲ್ಲಿ ಅಸಮಾನತೆ, ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಅವರು ನಡೆಸಿದ ನಿರಂತರ ಹೋರಾಟಗಳನ್ನು ಮನವರಿಕೆ ಮಾಡಿಕೊಳ್ಳುತ್ತಿರಬೇಕು” ಎಂದರು.
ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಸರಳವಾಗಿದ್ದರೂ ಸಂದೇಶಪೂರ್ಣವಾಗಿ, ಭಾಗವಹಿಸಿದ ಪ್ರತಿಯೊಬ್ಬರ ಮನಸ್ಸಿನಲ್ಲಿ ಚಿಂತನೆಗೆ ದಾರಿ ಮಾಡಿಕೊಡುವಂತಿತ್ತು.
ಕಾರ್ಮಿಕ ಇಲಾಖೆಯ ಡೆಟಾ ಎಂಟ್ರಿ ಅಧಿಕಾರಿ ಶರಣು ದಬಕಿ ಮಾತನಾಡುತ್ತ, “ಕಟ್ಟಡ ಕಾರ್ಮಿಕರ ಹಕ್ಕುಗಳು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಕಾರ್ಮಿಕರ ನೋಂದಣಿ ಪ್ರಕ್ರಿಯೆಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ವಿಶೇಷವಾಗಿ ಲೇಬರ್ ಕಾರ್ಡ್ಗಳ ಅಗತ್ಯತೆ ಮತ್ತು ಅದರಿಂದ ಲಭ್ಯವಾಗುವ ಸೌಲಭ್ಯಗಳ ಬಗ್ಗೆ ತಿಳಿದಿರಬೇಕು. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು” ಎಂದು ಸಲಹೆ ನೀಡಿದರು.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಮಾತನಾಡಿ, “ಅಂಬೇಡ್ಕರ್ ಅವರ ಚಿಂತನೆಗಳು ಇಂದಿನ ಸಮಾಜದಲ್ಲಿ ಇನ್ನಷ್ಟು ಪ್ರಸ್ತುತವಾಗಿವೆ. ಸಮಾನತೆ, ನ್ಯಾಯ ಮತ್ತು ಮಾನವವೀಯ ಮೌಲ್ಯಗಳು ಅಂಬೇಡ್ಕರ್ ನಮಗೆ ಕೊಟ್ಟ ಕೊಡುಗೆಯಾಗಿದೆ” ಎಂದರು. ʼವ್ಯಕ್ತಿತ್ವ ವಿಕಾಸ ಹಾಗೂ ಮಹಿಳಾ ಸಬಲೀಕರಣದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, “ಸಮಾಜದಲ್ಲಿ ಸಮಾನತೆ ಸ್ಥಾಪನೆಗೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ಪಡಬೇಕು” ಎಂದರು.
ಇದನ್ನೂ ಓದಿ > ವಿಜಯಪುರ | ಸರ್ವ ಜನಾಂಗದ ಸಮಾನತೆಗೆ ಶ್ರಮಿಸಿದವರು ಅಂಬೇಡ್ಕರ್: ಡಾ.ಬಾಬುರಾಜೇಂದ್ರ ನಾಯಕ್
ಕಾರ್ಯಕ್ರಮದ ಪ್ರಮುಖ ಅಂಗವಾಗಿ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ಗಳನ್ನು ವಿತರಿಸಲಾಯಿತು. ಈ ಮೂಲಕ ಅನೇಕ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ನೆರವಾದದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು.
ಕಾರ್ಯಕ್ರಮದಲ್ಲಿ ಮಹಿಳೆಯರು, ಕಟ್ಟಡ ಕಾರ್ಮಿಕರು, ಯುವಕ-ಯುವತಿಯರು ಹಾಗೂ ಸ್ಪೂರ್ತಿ ಸಿಂದಗಿ ತಾಲೂಕು ಮಹಿಳಾ ಸಂಘಗಳ ಒಕ್ಕೂಟ, ಸಿಂದಗಿ ಹಾಗೂ ಸಿಂಧೂತಾಯಿ ಮಾಜಿ ದೇವದಾಸಿ ತಾಯಂದಿರ ತಾಲೂಕು ಒಕ್ಕೂಟ, ಸಿಂದಗಿ ಭಾಗವಹಿಸಿದ್ದರು.




