ಡ್ಯಾರನ್ ಅಸಿಮೊಗ್ಗು ಅವರ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಇರಾನ್ ನೀತಿ ಅಮೆರಿಕಕ್ಕೆ ದೀರ್ಘಕಾಲದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಕಷ್ಟವನ್ನು ತರಬಹುದು. ಇತಿಹಾಸದಲ್ಲೇ 1953ರ ಇರಾನ್ ಹಸ್ತಕ್ಷೇಪದಿಂದ ಆರಂಭವಾದ ತಪ್ಪುಗಳಂತೆ, ಯೋಜನೆ ಇಲ್ಲದ ಸೈನಿಕ ಕ್ರಮಗಳು ಜನರಲ್ಲಿ ವಿರೋಧವನ್ನು ಹುಟ್ಟುಹಾಕಿ, ಅಮೆರಿಕದ ‘ಸಾಫ್ಟ್ ಪವರ್’ ಅನ್ನು ದುರ್ಬಲಗೊಳಿಸುತ್ತವೆ ಎಂಬುದನ್ನು ಅವರು ಎಚ್ಚರಿಸುತ್ತಾರೆ. ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ತಂತ್ರಜ್ಞಾನಿಕ ಅಂಶಗಳನ್ನು ಲೆಕ್ಕಿಸದೇ ನಡೆಸುವ ಯುದ್ಧ, ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸುವುದರ ಜೊತೆಗೆ, ಅಮೆರಿಕದ ಒಳರಾಜಕೀಯದಲ್ಲಿಯೂ ವಿಭಜನೆ ಹೆಚ್ಚಿಸುವ ಅಪಾಯವಿದೆ. ಅಂತಿಮವಾಗಿ, ಈ ರೀತಿಯ ತುರ್ತು ಮತ್ತು ಯೋಚನೆಯಿಲ್ಲದ ವಿದೇಶಾಂಗ ನೀತಿ ಅಮೆರಿಕದ ಪ್ರಜಾಪ್ರಭುತ್ವ, ಗೌರವ ಮತ್ತು ಜಾಗತಿಕ ನಾಯಕತ್ವಕ್ಕೆ ಗಂಭೀರ ಹಾನಿ ಉಂಟುಮಾಡಬಹುದು.
ನೋಬೆಲ್ ಪ್ರಶಸ್ತಿ ವಿಜೇತ ಡ್ಯಾರನ್ ಅಸಿಮೊಗ್ಗು ಡೊನಾಲ್ಡ್ ಟ್ರಂಪ್ ಇರಾನಿಗೆ ಸಂಬಂಧಿಸಿದಂತೆ ಮಾಡ್ತಿರೋ ಎಡವಟ್ಟು ಅಮೇರಿಕಾಕ್ಕೆ ಮುಳವಾಗಬಹುದು ಅಂತ ಅಭಿಪ್ರಾಯ ಪಟ್ಟಿದ್ದಾರೆ. ಅವರು ಇತ್ತೀಚೆಗೆ ಪ್ರಾಜೆಕ್ಟ್ ಸಿಂಡಿಕೇಟ್ನಲ್ಲಿ ಬರೆದ ಲೇಖನದಲ್ಲಿ ‘ಟ್ರಂಪ್ ಅಧ್ಯಕ್ಷರಾದ ಮೇಲೆ ಅಮೆರಿಕದ ವಿದೇಶಾಂಗ ನೀತಿ ತೀರಾ ಕೆಳಮಟ್ಟಕ್ಕೆ ಇಳಿದುಹೋಗಿದೆ. ವೆನೆಜುವೆಲಾದ ಡಿಕ್ಟೇಟರ್ನ ಕಿಡ್ನಾಪ್ ಮಾಡಿದ ಬೆನ್ನಲ್ಲೇ, ಈಗ ಇರಾನ್ ಮೇಲೆ ಯುದ್ಧಕ್ಕೆ ನಿಂತಿರೋದು ಅಮೆರಿಕಕ್ಕೆ ದೊಡ್ಡ ಮಟ್ಟದ ಹೊಡೆತ ಕೊಡುತ್ತೆ. ಅಷ್ಟೇ ಅಲ್ಲ, ಇಡೀ ಜಗತ್ತು ಅಮೆರಿಕದ ಶಕ್ತಿಯನ್ನು ನೋಡೋ ರೀತಿಯೇ ಇದರಿಂದ ಬದಲಾಗಿಬಿಡುತ್ತದೆ” ಅಂತ ಹೇಳಿದ್ದಾರೆ.
ಅಮೆರಿಕ ಸರಿಯಾಗಿ ಪ್ಲಾನ್ ಮಾಡದೆ ಈ ತರಹ ಯೋಜನೆಯಿಲ್ಲದೆ ಬೇರೆ ದೇಶಗಳ ವಿಷಯದಲ್ಲಿ ತಲೆಹಾಕಿ ಕೈ ಸುಟ್ಟುಕೊಳ್ಳಿರೋದು ಇದೇ ಮೊದಲೇನಲ್ಲ. ಹಿಂದೆಯೂ ಹೀಗೆ ಮಾಡಿದೆ. ಅಸಿಮೊಗ್ಗು ಹೇಳುವಂತೆ “ಇದಕ್ಕೆ ಒಂದು ಸೊಗಸಾದ ಉದಾಹರಣೆ ಅಂದ್ರೆ 1953ರಲ್ಲಿ ಇರಾನಿನ ಚುನಾಯಿತ ಜನಪ್ರಿಯ ಪ್ರಧಾನ ಮಂತ್ರಿ ಮೊಹಮ್ಮದ್ ಮೊಸಾದೆಫ್ ಬ್ರಿಟಿಷ್ ಒಡೆತನದ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿದ್ದ, ಅದಕ್ಕೆ ಅಮೆರಿಕದ ಸಿಐಎ ಪ್ರಧಾನ ಮಂತ್ರಿ ಅವರನ್ನು ಅಧಿಕಾರದಿಂದ ಉರುಳಿಸಿತು. ಈ ಘಟನೆಯಿಂದಾಗಿಯೇ 1979ರಲ್ಲಿ ಇರಾನಿನಲ್ಲಿ ಕ್ರಾಂತಿಯಾಯಿತು ಅಂತ ಹೇಳುವುದಕ್ಕಾಗುವುದಿಲ್ಲ ನಿಜ. ಆದರೆ ಅವರು ಆರಿಸಿದ್ದ ಪ್ರಧಾನಿಯ ಜಾಗದಲ್ಲಿ ಅಮೆರಿಕ ತಂದು ಕೂರಿಸಿದ ಆ ರಾಜಪ್ರಭುತ್ವದ ಮೇಲೆ ಇರಾನಿನ ಜನರಲ್ಲಿ ಅಸಮಾಧಾನ ಮೂಡೋಕೆ ಸಿಐಎ ಮಾಡಿದ ಆ ಉದ್ಧಟತನದ ಕೆಲಸವೇ ಬಹುತೇಕ ಕಾರಣ ಅನ್ನೋದ್ರಲ್ಲಿ ಸಂಶಯವೇ ಇಲ್ಲ.”

“ಇದೇ ಕಾರಣಕ್ಕೆ ಆಗ ಇರಾನಿನ ಕಮ್ಯುನಿಸ್ಟರು. ಸಂಪ್ರದಾಯವಾದಿಗಳು ಮತ್ತು ಲಿಬರಲ್ಗಳು ಸೇರಿದಂತೆ ಎಲ್ಲಾ ವರ್ಗದ ಜನರೂ ಸೇರಿ ಆ ‘ಷಾ’ ರಾಜನನ್ನು ಅಧಿಕಾರದಿಂದ ಕಿತ್ತಾಕೋದಕ್ಕೆ ಒಂದಾಗಿದ್ದು, ಆದ್ರೆ ದೊಡ್ಡ ದುರಂತ ಅಂದ್ರೆ, ಈ ಬೊಮೇನಿ ಎಲ್ಲರನ್ನೂ ಒಪ್ಪಿಸಿಕೊಂಡು ಹೋಗೋ ನಾಯಕ ಆಗಿರಲೇ ಇಲ್ಲ. ಅಧಿಕಾರಕ್ಕೆ ಬಂದ ಕೂಡಲೇ ತನ್ನ ಹಳೆಯ ಮಿತ್ರರ ಮೇಲೆಯೇ ತಿರುಗಿಬಿದ್ದ. ಜನರನ್ನು ಹತ್ತಿಕ್ಕೋ ಒಂದು ತೀವ್ರ ಧಾರ್ಮಿಕ ಆಡಳಿತವನ್ನ ತಂದ. ಅದೇ ಆಡಳಿತ ಇವತ್ತಿಗೂ ಅಲ್ಲಿ ಮುಂದುವರಿಯುತ್ತಿದೆ.”

ಡ್ಯಾರನ್ ಆಸೆಮೊಗ್ಗು ಅವರು 2024ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಎಂಐಟಿಯಲ್ಲಿ (MIT) ಅರ್ಥಶಾಸ್ತ್ರದ ಇನ್ಸಿಟ್ಯೂಟ್ ಪ್ರೊಫೆಸರ್ ಆಗಿದ್ದಾರೆ. ಇವರು ಜೇಮ್ಸ್ ಎ. ರಾಬಿನ್ಸನ್ ಅವರೊಂದಿಗೆ ಸೇರಿ ‘ವೈ ನೇಷನ್ಸ್ ಫೇಲ್: ದಿ ಒರಿಜಿನ್ಸ್ ಆಫ್ ಪವರ್, ಪ್ರಾಸ್ಪೆರಿಟಿ ಆಂಡ್ ಪಾವರ್ಟಿ’ (ಪ್ರೊಫೈಲ್, 2019) ಪುಸ್ತಕವನ್ನು ಮತ್ತು ಸೈಮನ್ ಜಾನ್ಸನ್ ಅವರೊಂದಿಗೆ ಸೇರಿ ‘ಪವರ್ ಆಂಡ್ ಪ್ರೋಗ್ರೆಸ್: ಅವರ್ ಫೌಸಂಡ್ ಇಯರ್ ಸ್ಟ್ರಗಲ್ ಓವರ್ ಟೆಕ್ನಾಲಜಿ ಅಂಡ್ ಪ್ರಾಸ್ಪೆರಿಟಿ’ (ಪಬ್ಲಿಕ್ ಅಫೇರ್ಸ್, 2023) ಪುಸ್ತಕವನ್ನು ಬರೆದಿದ್ದಾರೆ.
ಅಸಿಮೊಗ್ಗು ಹೇಳುವಂತೆ “ಇದರಿಂದ ನಾವು ಕಲಿಯಬೇಕಾದ ಪಾಠ ಅಂದ್ರೆ, ಅಮೆರಿಕ ಈ ತರಹ ಬೇರೆ ದೇಶಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದಾಗಲೆಲ್ಲಾ ಅದರಿಂದ ಅಂದಾಜು ಮಾಡಲಿಕ್ಕಾಗದ ಪರಿಣಾಮಗಳು ಆಗುತ್ತವೆ. ಒಂದು ಕಡೆ ಇದರಿಂದ ಜನರ ಮನಸ್ಸಿನಲ್ಲಿ ದೀರ್ಘಕಾಲದ ಸಿಟ್ಟು ಉಳಿದುಬಿಡುತ್ತದೆ. ಇನ್ನೊಂದು ಕಡೆ ಅಮೆರಿಕದ ‘ಸಾಫ್ಟ್ ಪವರ್’ (ಅಂದ್ರೆ ಪ್ರೀತಿ ಮತ್ತು ಗೌರವದಿಂದ ಜಗತ್ತನ್ನು ಒಪ್ಪಿಸುವ ಶಕ್ತಿ) ಮಣ್ಣು ಪಾಲಾಗುತ್ತೆ. ಅಮೆರಿಕ ತನ್ನ ಪ್ರಾಬಲ್ಯ ಏನಿದ್ರೂ ಒಳ್ಳೆಯದಕ್ಕೇ ಬಳಸಲಾಗುತ್ತದೆ. ಮತ್ತು ಜಗತ್ತಿನಲ್ಲಿ ನೆಮ್ಮದಿ ಮತ್ತು ನಂಬಿಕೆ ಇರಬೇಕಂದ್ರೆ ಅದು ಅವಶ್ಯಕ ಅಂತ ನಂಬಿಸಿತ್ತು. ಹಾಗೆ ನಂಬಿಸಿ ಜಗತ್ತಿನ ತನ್ನೆಲ್ಲ ಮಿತ್ರ ರಾಷ್ಟ್ರಗಳನ್ನು ಒಟ್ಟಿಗೆ ಇಡೋಕೆ ಈ ಸಾಫ್ಟ್ ಪವರ್ ಅನ್ನೇ ಅದು ಇಷ್ಟು ದಿನ ನೆಚ್ಚಿಕೊಂಡಿತ್ತು.”
ಅಸಿಮೊಗ್ಗು ಇದು ತುಂಬಾ ಮುಖ್ಯ ಅಂತ ಭಾವಿಸುತ್ತಾರೆ ಯಾಕೆ ಅಂದ್ರೆ, “ಒಬ್ಬ ಬಲಿಷ್ಠ ನಾಯಕ ಸುಮ್ಮನೆ ರೌಡಿಯ ತರ ಆಡೋಕೆ ಶುರು ಮಾಡಿದ್ರೆ ಜನರಿಗೆ ಅದು ಇಷ್ಟ ಆಗಲ್ಲ, ಅವು ಅದನ್ನ ವಿರೋಧಿಸ್ತಾರೆ. ಪದೇ ಪದೇ ಮತ್ತು ಅನಗತ್ಯವಾಗಿ ಸೈನ್ಯದ ಶಕ್ತಿ ತೋರಿಸೋದರಿಂದ, ಅಮೆರಿಕದ ಮೇಲಿರೋ ಮರ್ಯಾದೆಯನ್ನ ಮಣ್ಣುಪಾಲು ಮಾಡುತ್ತೆ. ಅದ್ರಲ್ಲೂ ಮಾಡ್ತಿರೋ ಕೆಲಸಕ್ಕೆ ಒಂದು ಸರಿಯಾದ ಕಾರಣ ಇಲ್ಲದಿದ್ದಾಗಲಂತೂ ಇದು ಇನ್ನೂ ಅಪಾಯ. ಶೀತಲ ಸಮರದ ಕಾಲದಲ್ಲಿ ಕಮ್ಯುನಿಸಂ ಹರಡೋದನ್ನ ತಡೆಯಬೇಕು ಅನ್ನೋ ಒಂದು ದೊಡ್ಡ ಉದ್ದೇಶವಾದ್ರೂ ಅಮೆರಿಕಕ್ಕಿತ್ತು, ಯಾಕಂದ್ರೆ ಅದು ಆಗ ನಿಜವಾದ ಭೀತಿಯಾಗಿತ್ತು.”
ಆದ್ರೆ ಒಂದು ದೇಶದ ಗೌರವಕ್ಕೆ ಇದಕ್ಕಿಂತಲೂ ದೊಡ್ಡ ಪೆಟ್ಟು ಬೀಳೋದು ಯಾವಾಗ ಅಂದರೆ, ಯಾವುದೇ ಪ್ಲಾನ್ ಇಲ್ಲದೆ, ಅಲ್ಲಿನ ಜನರ ಜೀವದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಯುದ್ಧಕ್ಕೆ ಹೋದಾಗ. ಈಗ ಮಿಡಲ್ ಈಸ್ಟ್ನಲ್ಲಿ ನಾವು ನೋಡ್ತಿರೋದು ಇದನ್ನೆ. ಟ್ರಂಪ್ ಅವರ ಈ ಆತುರದ ಮತ್ತು ಆಲೋಚನೆ ಇಲ್ಲದ ಯುದ್ದದಿಂದ ಅಮೆರಿಕದ ಇಮೇಜ್ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ ಹೋಗೋದಲ್ಲಿ ಸಂಶಯವೇ ಇಲ್ಲ. ಅಷ್ಟೇ ಅಲ್ಲ, ಈ ಕಳೆದುಹೋದ ಗೌರವವನ್ನ ಗೆ ಮತ್ತೆ ಸರಿಮಾಡೋಕೆ ಅವರ ತಂಡದಲ್ಲಿ ಯಾರೊಬ್ಬರಿಗೂ ಕಾಳಜಿ ಇಲ್ಲ ಅನ್ನುವುದು ಅಸಿಮೊಗ್ಗು ಅವರ ಆತಂಕ, ಈಗಿರೋ ವೈಟ್ ಹೌಸ್ಗೆ ವಿದೇಶಿ ನಾಯಕರ ಹಾಗೂ ಜನರ ಮನಸ್ಸು ಮತ್ತು ವಿಶ್ವಾಸ ಗೆಲ್ಲೋದು ಮುಖ್ಯ ಅನ್ನಿಸುತ್ತಿಲ್ಲ. ಅದರ ಬದಲು ಬರಿ ಬೆದರಿಕೆ ಹಾಕೋದು ಅಥವಾ ತಮ್ಮ ಲಾಭಕ್ಕೆ ವ್ಯವಹಾರ ಮಾಡಿಕೊಳ್ಳೋದೇ ‘ಸರಿಯಾದ ದಾರಿ’ ಅಂತ ಅವರು ಭಾವಿಸಿದ್ದಾರೆ.
ನಿಜ. ಇರಾನಿನ ಈ ಆಡಳಿತ ತುಂಬ ಕ್ರೂರವಾಗಿದೆ ಮತ್ತು ಜನರನ್ನು ಹತ್ತಿಕ್ಕುತ್ತಿದೆ. ಬಹುತೇಕ ಇರಾನಿಯನ್ನರಿಗೆ ಹೊಸ ಸುಪ್ರೀಂ ಲೀಡರ್ ಮೊಜ್ಜಬಾ ಬೊಮೇನಿ ಮೇಲಾಗಲಿ, ಅಥವಾ ಇಸ್ಲಾಮಿಕ್ ಕ್ರಾಂತಿಕಾರಿ ರಕ್ಷಣಾ ಪಡೆಯ ಮೇಲಾಗಲಿ ಪ್ರೀತಿಯೇನೂ ಇಲ್ಲ. ಹಾಗೆಂದ ಮಾತ್ರಕ್ಕೆ ಆ ಆಡಳಿತ ಬಿದ್ದು ಹೋಗುತ್ತೆ ಅಂದುಕೊಳ್ಳೋದು ತಪ್ಪು ಅಮೆರಿಕದ ಹಸ್ತಕ್ಷೇಪದಿಂದ ಅಲ್ಲಿ ಶಾಂತಿ ಹಾಗೂ ಸ್ಥಿರತೆ ಸಾಧ್ಯವಾಗುತ್ತೆ ಅನ್ನೋದು ಇನ್ನೂ ಸುಳ್ಳು.
‘ಈ ಯುದ್ಧದಲ್ಲಿ ಆಶ್ಚರ್ಯದ ವಿಷಯ ಅಂದರೆ, ಯುದ್ಧವನ್ನು ಎಷ್ಟು ಕೆಟ್ಟದಾಗಿ ಪ್ಲಾನ್ ಮಾಡಿದ್ದಾರೆ ಅನ್ನೋದು! ಶೀತಲ ಸಮರದ ಕಾಲದಲ್ಲಿ ಸಿಐಎ ಮಾಡಿದ ಎಡವಟ್ಟುಗಳಿಗಿಂತಲೂ ಇದು ಕೆಟ್ಟದಾಗಿದೆ. ಅಮೆರಿಕ ಮತ್ತು ಇಸ್ರೇಲ್ ಹತ್ತಿರ ಒಳ್ಳೆಯ ಬಾಂಬ್ಗಳೇನೋ ಇವೆ. ಎಲ್ಲಿಗೆ ಹಾಕಬೇಕು ಅನ್ನೋ ಗುರಿಗಳೂ ಇವೆ: ಆದ್ರೆ ಯುದ್ಧ ಶುರು ಮಾಡಿದ ಮೇಲೆ ಅಲ್ಲಿಂದ ವಾಪಸ್ ಬರೋದು ಹೇಗೆ ಅನ್ನೋ ಪ್ಲಾನೇ ಇಲ್ಲ!
ಇರಾನಿನ ಉನ್ನತ ನಾಯಕರುಗಳನ್ನು ಕೊಂದ ತಕ್ಷಣ ಅಲ್ಲಿನ ಸರ್ಕಾರವೇನೂ ಕುಸಿದು ಬೀಳೊಲ್ಲ ಅಂತ ಅಸಿಮೊಗ್ಗು ಹೇಳುತ್ತಾರೆ. ಅವರು ಹೇಳುವಂತೆ “ಇರಾನ್ ಸುಮ್ಮನೆ ಕೂರಲ್ಲ, ಅದು ಖಂಡಿತ ತಿರುಗಿ ಬೀಳುತ್ತೆ. ಅದ್ರಲ್ಲೂ ಇಡೀ ಏಷ್ಯಾ ಪ್ರದೇಶದಲ್ಲಿ ಅಸ್ಥಿರತೆ ಮೂಡಿಸೋದು ಮತ್ತು ಪೆಟ್ರೋಲ್ ಬೆಲೆ ಏರಿಸೋದು ಇರಾನಿನ ಪ್ಲಾನ್ ಆಗಿರುತ್ತೆ. ‘ಹಾರ್ಮುಜ್ ಜಲಸಂಧಿ’ ಇರಾನ್ ಕೈಯಲ್ಲಿರೋ ಅತಿ ದೊಡ್ಡ ಬ್ರಹ್ಮಾಸ್ತ್ರ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಟ್ರಂಪ್ ಸರ್ಕಾರ ಈ ಎಲ್ಲಾ ವಿಷಯಗಳನ್ನ ಪೂರ್ತಿ ಅಲಕ್ಷ್ಯ ಮಾಡಿದ ಹಾಗಿದೆ. ಕನಿಷ್ಟ ಅಲ್ಲಿಯ ಹಿರಿಯ ಅಧಿಕಾರಿಗಳ ಇತ್ತೀಚಿನ ಹೇಳಿಕೆಗಳನ್ನು ನೋಡಿದರೆ ಹಾಗೆ ತೋರುತ್ತದೆ.”
ಇದರಿಂದಾಗಿ “ಇರಾನ್ ಸರ್ಕಾರ ತಾನು ಮೇಲುಗೈ ಸಾಧಿಸಿದ್ದೇನೆ. ಆಂದುಕೂಳ್ಳುತ್ತಿದೆ. ಅಮೆರಿಕನ್ನರಿಗೆ ದೀರ್ಘಕಾಲ ಯುದ್ಧ ಮಾಡೋ ತಾಳ್ಮೆ ಇಲ್ಲ ಅಂತ ಅವರಿಗೆ ಚೆನ್ನಾಗಿ ಗೊತ್ತು. ಎಷ್ಟೇ ಕಷ್ಟ ಬಂದರೂ, ಜನರನ್ನು ಹತ್ತಿಕ್ಕಿಯಾದರೂ ಸರಿ, ಇಸ್ಲಾಮಿಕ್ ರಿಪಬ್ಲಿಕ್ಕಿನ ಅಧಿಕಾರವನ್ನು ಉಳಿಸಿಕೊಳ್ಳಲು ಅವರು ಸಿದ್ಧರಿದ್ದಾರೆ. ಇಡೀ ಜಾಗತಿಕ ಮಾರುಕಟ್ಟೆಯಲ್ಲಿ ಈಗಿರೋ ಆತಂಕವನ್ನು ನೋಡಿದ್ರೆ ಈ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಅಂತ ಅರ್ಥವಾಗುತ್ತೆ.” ಅಂತ ಅಸಿಮೊಗ್ಗು ಭಾವಿಸುತ್ತಾರೆ.
ಈಗಾಗಲೇ ಆರ್ಥಿಕತೆ ಸಂಕಷ್ಟದಲ್ಲಿದೆ. ಕೃತಕ ಬುದ್ದಿಮತ್ತೆಯ ಗುಳ್ಳೆಯ ಬಗ್ಗೆ ವ್ಯಾಪಕವಾಗಿ ಕೇಳುತ್ತಿದ್ದೇವೆ. ಇಂದನ ಮಾರುಕಟ್ಟೆಯಲ್ಲಿನ ಗೊಂದಲ ಮತ್ತು ಜಾಗತಿಕ ಅನಿಶ್ಚತತೆ ತೀವ್ರತೆಯಿಂದ ಸಮಸ್ಯೆ ಬಿಗಡಾಯಿಸಬಹುದು. ತೈಲದ ಬೆಲೆ ಜಾಸ್ತಿ ಆದ್ರೆ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆ ನಿಧಾನವಾಗುತ್ತದೆ. ಮತ್ತು ಎಲ್ಲದರ ಬೆಲೆ ಏರುತ್ತೆ. ಅಸಿಮೊಗ್ಲು ನೀಡಿರುವ ಎಚ್ಚರ ಈಗಾಗಲೇ ನಿಜ ಆಗಿದೆ.

ಇದರಿಂದಾಗಿ ಮುಂದೆ ಹೆಚ್ಚುವ ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಅಧಿಕಾರದಲ್ಲಿರೋ ಸರ್ಕಾರಗಳಿಗೆ ಭಾರಿ ಹೊಡೆತ ಕೊಡುತ್ತೆ. ಯುರೋಪ್ನಲ್ಲೂ ಅಷ್ಟೇ, ಅಲ್ಲಿನ ಹಳೆ ಸರ್ಕಾರಗಳಿಗೆ ಈ ‘ಬಲಪಂಥೀಯ’ ಗುಂಪುಗಳಿಂದ ಈಗಾಗಲೇ ದೊಡ್ಡ ಸವಾಲು ಎದುರಾಗಿದೆ. ಯುರೋಪ್ನ ಯಾವೊಬ್ಬ ಲೀಡರ್ಗೂ ಈ ಯುದ್ಧ ಇಷ್ಟ ಇಲ್ಲ. ಟ್ರಂಪ್ ಅವರು ‘ಬನ್ನಿ, ನಿಮ್ಮ ಯುದ್ಧ ಹಡಗುಗಳನ್ನು ಕಳುಹಿಸಿ’ ಅಂತ ಕೇಳಿದ್ರೂ, ಅವರು ನೇರವಾಗಿ ‘ಇಲ್ಲ’ ಅಂತ ಹೇಳಿ ತಿರಸ್ಕರಿಸಿದ್ದಾರೆ.”
ಇನ್ನು ಅಮೆರಿಕದಲ್ಲಂತೂ ನವೆಂಬರ್ ಎಲೆಕ್ಷನ್ನಲ್ಲಿ ಈ ಯುದ್ಧಕ್ಕೆ ಟ್ರಂಪ್ ಭಾರಿ ಬೆಲೆ ತೆರಬೇಕಾಗುತ್ತೆ ಅನ್ನುವ ಅನುಮಾನ ಇದೆ. ಅಸಿಮೊಗ್ಗು ಗುರುತಿಸಿರುವಂತೆ “ಆದ್ರೆ ಟ್ರಂಪ್ ‘ಸಿಸ್ಟಂಗೆ ವಿರುದ್ಧ’ ಇರೋ ನಾಯಕ ಅಂತ ಬಿಂಬಿತವಾಗಿದೆ. ಒಂದು ವೇಳೆ ಯುದ್ಧದಿಂದ ದೇಶದ ಆರ್ಥಿಕತೆ ಪೂರ್ತಿ ಹಾಳಾದರೂ ಅವರ ಕಟ್ಟಾ ಅಭಿಮಾನಿಗಳು “ಇದು ಟ್ರಂಪ್ ತಪ್ಪು” ಅಂತ ಯಾವತ್ತೂ ಒಪ್ಪಿಕೊಳ್ಳಲ್ಲ. ಅದರ ಬದಲು, “ನೋಡಿ, ಆ ಹಳೇ ಅಧಿಕಾರಿಗಳು ಅಥವಾ ಸಿಸ್ಟಮ್ ಟ್ರಂಪ್ಗೆ ಕೆಲಸ ಮಾಡೋಕೆ ಬಿಡ್ತಿಲ್ಲ, ಅದಕ್ಕೇ ದೇಶ ಹೀಗಾಯ್ತು” ಅಂತ ವ್ಯವಸ್ಥೆಯನ್ನು ಬೈತಾರೆ. ಆದು ದೇಶದ ಒಳಗಡೆ ಇನ್ನೂ ಜಾಸ್ತಿ ಜಗಳಕ್ಕೆ (Polarization) ದಾರಿ ಮಾಡಿಕೊಡುತ್ತೆ ಮತ್ತು ಅಮೆರಿಕದ ಒಳಗಿರೋ ವ್ಯವಸ್ಥೆಗಳನ್ನೇ ಹಾಳುಮಾಡುತ್ತೆ.”
ಅಸಿಮೊಗ್ಗು ತಮ್ಮ ಲೇಖನದಲ್ಲಿ ಗುರುತಿಸುವ ಇನ್ನೊಂದು ಅಂಶವೆಂದರೆ “ಇನ್ನು ಟ್ರಂಪ್ ಅವರಂತೂ ಈ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡ್ತಾರೆ! ರಿಪಬ್ಲಿಕನ್ ಮತ್ತು ಡೆಮಾಕೇಟ್ಗಳ ಮಧ್ಯೆ ಇನ್ನಷ್ಟು ಜಗಳ ಹಚ್ಚಿ, ಇಡೀ ದೇಶವನ್ನೇ ಎರಡು ಭಾಗ ಮಾಡೋಕೆ ನೋಡ್ತಾರೆ. ಅಷ್ಟೇ ಅಲ್ಲ, ದೇಶದ ಒಳಗಡೆ ಇನ್ನೂ ಶಾಂತಿ ಕೆಡಿಸೋ ಕೆಲಸಗಳನ್ನ ಮಾಡಬಹುದು. ಈಗಾಗಲೇ ಅಮೆರಿಕೆಯ ಒಳಗಡೆಯ ಸಂಸ್ಥೆಗಳು ದುರ್ಬಲವಾಗಿವೆ. ಅಧ್ಯಕ್ಷರ ಅಧಿಕಾರವನ್ನು ನಿಯಂತ್ರಣ ಮಾಡಬೇಕಿದ್ದ ಕಾನೂನುಗಳು ಸರಿಯಾಗಿ ಕೆಲಸ ಮಾಡ್ತಿಲ್ಲ. ಇದು ಟ್ರಂಪ್ ಅವರ ಕಾರ್ಯಯೋಜನೆಗೆ ತುಂಬಾ ಅನುಕೂಲ, ಅವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ವ್ಯವಸ್ಥೆಗಳನ್ನು ಇನ್ನಷ್ಟು ದುರ್ಬಲಗೊಳಿಸುತ್ತಾರೆ.
ಈ ಕೆಟ್ಟದಾಗಿ ಯೋಜಿಸಿದ ವಿದೇಶಿ ಸಾಹಸದಿಂದ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಮತ್ತು ಅದರ ಮರ್ಯಾದೆಗೆ (Soft Power) ಇನ್ನೆಷ್ಟು ತೊಂದರೆಯಾಗುತ್ತದೆ ಅನ್ನುವುದನ್ನು ಕಾದು ನೋಡಬೇಕು.
ಅಸಿಮೊಗ್ಗು ಅಂತಿಮವಾಗಿ ಹೇಳುವ ಮಾತು ಅಂದರೆ “ಇದರ ಪೆಟ್ಟನ್ನು ಅನುಭವಿಸಬೇಕಿರೋದು ಅಪ್ಪಟ ಅಮೆರಿಕನ್ನರೇ. ನಷ್ಟ ನಾವು ಊಹಿಸೋದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿರುತ್ತದೆ. ಅಮೆರಿಕದ ಪ್ರಜಾಪ್ರಭುತ್ವಕ್ಕೆ, ಸಾಮಾಜಿಕ ಸ್ಥಿರತೆಗೆ, ಮತ್ತು ಆರ್ಥಿಕ ಚೇತರಿಕೆಗೆ ಈ ಪ್ರಮಾಣದ ಅಪಾಯವನ್ನು ನಾವ್ಯಾರೂ ಈವರೆಗೆ ಕಂಡಿರಲಿಲ್ಲ.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




