ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಜಗತ್ತಿಗೆ ಶಾಂತಿ ಹಾಗೂ ಸಾಮರಸ್ಯದ ಸಂದೇಶ ಸಾರಿದ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಯುವಜನತೆ ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಆಗಸ್ಟ್ ಕ್ರಾಂತಿ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ’ ಕುರಿತ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಪಾಲಿಗೆ ಕೇವಲ ಸಿದ್ಧಾಂತಗಳಾಗಿರಲಿಲ್ಲ. ಅವು ಅವರ ಬದುಕಿನ ಮೂಲ ಮೌಲ್ಯಗಳಾಗಿದ್ದವು. ಅನ್ಯಾಯ, ಶೋಷಣೆ ಮತ್ತು ಅಸಮಾನತೆಗಳ ವಿರುದ್ಧ ಅಹಿಂಸಾತ್ಮಕ ಹೋರಾಟದ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ ಗಾಂಧೀಜಿ, ಅಧಿಕಾರಕ್ಕಿಂತ ನೈತಿಕತೆ ಶ್ರೇಷ್ಠ ಹಾಗೂ ಹಿಂಸೆಗಿಂತ ಅಹಿಂಸೆಯೇ ಶಕ್ತಿಯುತ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಿಂತಕ ಹಾಗೂ ಸಾಹಿತಿ ಮಂಜುನಾಥ ಜನಗೊಂಡ ಮಾತನಾಡಿ, “ಅಹಿಂಸೆ ಎಂದರೆ ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿರುವುದಲ್ಲ. ಬದಲಾಗಿ ಅನ್ಯಾಯದ ವಿರುದ್ಧ ಧೈರ್ಯದಿಂದ ನಿಲ್ಲುವ ಮನೋಭಾವವೂ ಅಹಿಂಸೆಯ ಭಾಗವಾಗಿದೆ. ಪ್ರತಿಯೊಬ್ಬರೂ ಆತ್ಮಗೌರವ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಗಳಿಗೆ ಆದ್ಯತೆ ನೀಡಬೇಕು. ನಮ್ಮ ಕರ್ಮ ಮತ್ತು ನಡವಳಿಕೆಗೆ ನಾವೇ ಹೊಣೆಗಾರರಾಗಿರಬೇಕು. ನಾವು ಬಿತ್ತಿದ ಬೀಜವನ್ನೇ ಫಲವಾಗಿ ಪಡೆಯುತ್ತೇವೆ ಎಂಬುದನ್ನು ಅರಿತು ಬದುಕಬೇಕು” ಎಂದು ಹೇಳಿದರು.
ಜಿ.ಎಸ್. ಶಿವರುದ್ರಪ್ಪ ಹಾಗೂ ಸಿದ್ಧಯ್ಯ ಅವರ ಕವಿತೆಗಳನ್ನು ಉಲ್ಲೇಖಿಸಿದ ಅವರು, ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ತಾತ್ಯಾ ಟೋಪೆ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ವಿಜಯಕುಮಾರ ಬಿ. ಅಜೂರ ಮಾತನಾಡಿ, ಆಗಸ್ಟ್ ಕ್ರಾಂತಿಯ ಐತಿಹಾಸಿಕ ಹಿನ್ನೆಲೆ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಮಹತ್ವವನ್ನು ವಿವರಿಸಿದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಾಲಿ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮೇಘಾ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರಾದ ಶ್ರುತಿ ಮತ್ತು ವೀಣಾ ತಂಡದವರು ಗೀತಗಾಯನ ನಡೆಸಿಕೊಟ್ಟರು. ವರ್ಷಾ ನಡಕಟ್ಟಿ ವಂದಿಸಿದರು. ಲಕ್ಷ್ಮೀ ದೇವಗಿರಿ ಕಾರ್ಯಕ್ರಮ ನಿರೂಪಿಸಿದರು.




