ಸಾಮಾಜಿಕ ಭದ್ರತೆ, ಶಿಕ್ಷಣ, ವಸತಿ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಯುವಜನತೆ ನಡೆಸುತ್ತಿರುವ ಪ್ರತಿಭಟನೆಗಳು ಈಗ ಯುರೋಪ್‌ನಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿವೆ. ಫ್ರಾನ್ಸ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆಯ ಬಿಸಿ ಈಗ ಜರ್ಮನಿಗೂ ಆವರಿಸಿದ್ದು, ಶನಿವಾರ ರಾತ್ರಿ ಜರ್ಮನಿಯ ಪ್ರಮುಖ ನಗರಗಳಲ್ಲಿ ಬೃಹತ್ ದಂಗೆಗಳು ನಡೆದಿವೆ.
ಜರ್ಮನಿಯಲ್ಲಿ ಈ ಬೃಹತ್ ಪ್ರತಿಭಟನೆಗಳನ್ನು “Gen Z regelt” (Gen Z ಜವಾಬ್ದಾರಿ ವಹಿಸಿಕೊಳ್ಳುತ್ತದೆ) ಎಂಬ ಯುವ ಸಂಘಟನೆ ಆಯೋಜಿಸಿತ್ತು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆರ್ಥಿಕ ನೆರವು, ವಸತಿ ಸೌಲಭ್ಯ, ಸಾಲದ ಹೊರೆ ತಗ್ಗಿಸುವುದು ಮತ್ತು ಸೇನೆಗೆ ಕಡ್ಡಾಯ ಭರ್ತಿಯನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬರ್ಲಿನ್, ಫ್ರಾಂಕ್‌ಫರ್ಟ್, ಕೊಲೋನ್, ಹ್ಯಾಂಬರ್ಗ್ ಮತ್ತು ಮ್ಯೂನಿಚ್ ಸೇರಿದಂತೆ 34ಕ್ಕೂ ಹೆಚ್ಚು ನಗರಗಳಲ್ಲಿ ಹತ್ತಾರು ಸಾವಿರ ಯುವಕರು ಬೀದಿಗಿಳಿದರು.
ಹಗಲಿನಲ್ಲಿ ಶಾಂತಿಯುತವಾಗಿ ಸಾಗಿದ ಮೆರವಣಿಗೆಗಳು, ರಾತ್ರಿಯಾಗುತ್ತಿದ್ದಂತೆ ಉಗ್ರ ಸ್ವರೂಪ ಪಡೆದುಕೊಂಡವು. ಪ್ರಮುಖ ನಗರಗಳ ಬೀದಿಗಳಲ್ಲಿ ಮುಖ ಮುಚ್ಚಿಕೊಂಡ ದುಷ್ಕರ್ಮಿಗಳು ವಿನಾಶಕಾರಿ ಕೃತ್ಯಗಳಲ್ಲಿ ತೊಡಗಿದರು.
ಜರ್ಮನಿಯ ಹಣಕಾಸು ಕೇಂದ್ರವಾದ ಫ್ರಾಂಕ್‌ಫರ್ಟ್‌ನ ‘ಝೈಲ್’ ಶಾಪಿಂಗ್ ರಸ್ತೆಯಲ್ಲಿ ಗಲಭೆಕೋರರು ಅಂಗಡಿಗಳ ಗಾಜುಗಳನ್ನು ಒಡೆದು ಲೂಟಿ ಮಾಡಿದರು. ಬಂದೂಕಿನ ಅಂಗಡಿಯೊಂದರ ಗಾಜು ಒಡೆದು ಶಸ್ತ್ರಾಸ್ತ್ರಗಳನ್ನು ಕದಿಯಲು ಯತ್ನಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಮೇಲೆ ಬಾಂಬ್ ಮತ್ತು ಕಲ್ಲುಗಳನ್ನು ತೂರಲಾಯಿತು. ಇಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, 54ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಬರ್ಲಿನ್: ರೋಸೆಂಥಾಲರ್ ಪ್ಲಾಟ್ಸ್‌ನಿಂದ ಪ್ರಿಂಜ್‌ಲಾಯರ್ ಬರ್ಗ್‌ವರೆಗೆ ನಡೆದ ಮೆರವಣಿಗೆಯಲ್ಲಿ 27 ಪೊಲೀಸರು ಗಾಯಗೊಂಡಿದ್ದು, 56ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಹ್ಯಾಂಬರ್ಗ್ ಮತ್ತು ಕೊಲೋನ್: ಹ್ಯಾಂಬರ್ಗ್‌ನಲ್ಲಿ ರಸ್ತೆಗಳಿಗೆ ಬೆಂಕಿ ಹಚ್ಚಿ ತಡೆಗೋಡೆಗಳನ್ನು ನಿರ್ಮಿಸಿದ ಗಲಭೆಕೋರರನ್ನು ಚದುರಿಸಲು ಪೊಲೀಸರು ವಾಟರ್ ಕ್ಯಾಲನ್ ಬಳಸಿದರು. ಕೊಲೋನ್ ನಲ್ಲೂ ರೈಲ್ವೆ ನಿಲ್ದಾಣದ ಬಳಿ ಪೊಲೀಸರ ಮೇಲೆ ದಾಳಿ ನಡೆಸಲಾಯಿತು.
ಫ್ರಾಂಕ್‌ಫರ್ಟ್ ಹಾಗೂ ಜರ್ಮನಿಯಾದ್ಯಂತ ನಡೆದ ಹಿಂಸಾಚಾರವನ್ನು ಅಲ್ಲಿನ ಸರ್ಕಾರ ತೀವ್ರವಾಗಿ ಖಂಡಿಸಿದೆ. ಗೃಹ ಸಚಿನ ಅಲೆಕ್ಸಾಂಡರ್ ಡೋಬ್ರಿಂಟ್ ಮಾತನಾಡಿ, “ಅತ್ಯಂತ ತೀವ್ರ ಸ್ವರೂಪದ ಹಿಂಸಾಚಾರದಲ್ಲಿ ತೊಡಗಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಫ್ರಾನ್ಸ್‌ನಲ್ಲಿ ನಡೆದಂತಹ ಪರಿಸ್ಥಿತಿ ಜರ್ಮನಿಯಲ್ಲಿ ಮರುಕಳಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ” ಎಂದಿದ್ದಾರೆ. ಅಲ್ಲದೆ, ಎಡಪಂಥೀಯ ತೀವ್ರಗಾಮಿಗಳು ಶಾಂತಿಯುತ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೆಸ್ಸೆ ರಾಜ್ಯದ ಗೃಹ ಸಚಿವ ರೋಮನ್ ಪೊಸೆಕ್ ಆರೋಪಿಸಿದ್ದಾರೆ.
ಪ್ರತಿಭಟನಾ ಸಂಘಟನೆಯ ವಕ್ತಾರೆ ಲಿಟಾ ಫ್ರೀಡ್ರಿಕ್ ಮಾತನಾಡಿ, “ನಾವು ಯುದ್ಧ ಮತ್ತು ಒತ್ತಡದ ವಿರುದ್ಧ, ಶಾಂತಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ನಮ್ಮ ಮೂಲ ಉದ್ದೇಶ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ಸಿಗಬೇಕು ಎಂಬುದೇ ಹೊರತು ಹಿಂಸಾಚಾರವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಜರ್ಮನಿಯಷ್ಟೇ ಅಲ್ಲದೆ ಫ್ರಾನ್ಸ್, ಇಟಲಿ, ಪೋರ್ಚುಗಲ್, ಸ್ಪೇನ್, ಗ್ರೀಸ್ ಮತ್ತು ಐರ್ಲೆಂಡ್‌ನಲ್ಲೂ ಯುವಜನರು ಬೀದಿಗಿಳಿದಿದ್ದಾರೆ. ಫ್ರಾನ್ಸ್‌ನಲ್ಲಿ 3,20,000ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, 770ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪೋರ್ಚುಗಲ್‌ನಲ್ಲಿ ಮನೆಗಳ ಬಾಡಿಗೆ ಮತ್ತು ಆಸ್ತಿ ಬೆಲೆ ಏರಿಕೆಯನ್ನು ವಿರೋಧಿಸಿ ಯುವಕರು ಪ್ರತಿಭಟಿಸುತ್ತಿದ್ದಾರೆ.
ಒಟ್ಟಿನಲ್ಲಿ, ಆರ್ಥಿಕ ಮುಗ್ಗಟ್ಟು ಮತ್ತು ಜೀವನ ವೆಚ್ಚದ ಏರಿಕೆಯಿಂದ ಕಂಗಾಲಾಗಿರುವ ಯುರೋಪ್‌ನ ಯುವಸಮುದಾಯದ ಆಕ್ರೋಶ ಈಗ ಇಡೀ ಖಂಡದ ಶಾಂತಿಗೆ ಸವಾಲಾಗಿ ಪರಿಣಮಿಸಿದೆ.




