ಬಸವನಾಡಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಿಸುವ ಸಂಕಲ್ಪಕ್ಕೆ ಪೊಲೀಸ್ ಇಲಾಖೆಯ ಸಸಿ ನೆಡುವ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸುಮಾರು ಒಂದು ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಹಸಿರು ವಿಜಯಪುರ ನಿರ್ಮಾಣದಿಂದ ಜನರ ಭವಿಷ್ಯ ಉಜ್ವಲವಾಗಲಿದೆ. ಪೊಲೀಸ್ ಇಲಾಖೆಯು ಒಂದೂವರೆ ಎಕರೆ ಜಾಗದಲ್ಲಿ ವಿವಿಧ ಪ್ರಭೇದಗಳ ಮರಗಳನ್ನು ಬೆಳೆಸಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಪ್ರತಿಯೊಂದು ಸರ್ಕಾರಿ ಇಲಾಖೆಯೂ ತಮ್ಮ ಆವರಣದಲ್ಲಿರುವ ಖಾಲಿ ಜಾಗಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಎಸ್ಪಿ ಕಚೇರಿ ಆವರಣದಲ್ಲಿ ಸಸಿ ನೆಡಲು ಸ್ಥಳ ಗುರುತಿಸುವುದು, ನೆಲ ಸಮತಟ್ಟು ಮಾಡಿಸುವುದು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೋಟಿ ವೃಕ್ಷ ಅಭಿಯಾನದ ತಂಡ ಕೈಗೊಂಡಿದೆ. ಸದ್ಯಕ್ಕೆ ಸಾಂಕೇತಿಕವಾಗಿ 10 ಸಸಿಗಳನ್ನು ನೆಡಲಾಗಿದ್ದು, ಅರಣ್ಯ ಇಲಾಖೆಯ ಸಹಕಾರ ಪಡೆಯಲಾಗಿದೆ. ಸಸಿಗಳ ನಿರ್ವಹಣೆಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯೇ ಸಸಿಗಳ ಪಾಲನೆ ಹಾಗೂ ಪೋಷಣೆಯ ಜವಾಬ್ದಾರಿ ವಹಿಸಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಹೊದಿಕೆ ಹೆಚ್ಚಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಲವು ಅಧಿಕಾರಿಗಳು ಕೈಜೋಡಿಸಿದ್ದಾರೆ. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಿಡ-ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಪರಿಸರವನ್ನು ಬಳುವಳಿಯಾಗಿ ನೀಡೋಣ ಎಂದು ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ ಡಿವೈಎಸ್ಪಿ ಮುರುಗೇಶ ಉಪಾಸೆ, ವಿಜಯಪುರ ನಗರ ಡಿವೈಎಸ್ಪಿ ನಾಗರಾಜ, ಗ್ರಾಮೀಣ ಡಿವೈಎಸ್ಪಿ ಟಿ.ಎಸ್. ಸುಲ್ಪಿ, ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲಿನಾಥ ಬಿ. ಕುಸನಾಳ, ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಅಜೂರ, ರಾಜು ಬಿರಾದಾರ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ. ಮುರಗೇಶ ಪಟ್ಟಣಶೆಟ್ಟಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಪರಿಸರಾಸಕ್ತರು ಉಪಸ್ಥಿತರಿದ್ದರು.ವಿಸಿಜಿ ಪದಾಧಿಕಾರಿಗಳಾದ ಸಂತೋಷ ಔರಸಂಗ, ವೀರೇಂದ್ರ ಗುಚ್ಚೆಟ್ಟಿ, ಶಿವಾನಂದ ಯರನಾಳ, ವಿನಯ ಕಂಚಾಣಿ, ಸೋಮಶೇಖರ, ಸಚಿನ ಪಾಟೀಲ, ಗುರುಶಾಂತ ಕಾಪ್ಸೆ, ಎ.ಪಿ. ಬಸನಾಳ, ಡಾ. ರಾಜು ಯಲಗೊಂಡ, ಸಂಗಮೇಶ ಹಾವರಗಿ, ಸಮೀರ್ ಬಳಿಗಾರ, ವಿಜಯಕುಮಾರ ಕೋರೆ, ಶಿವಾನಂದ ಕುಂಬಾರ, ಡಾ. ಪ್ರವೀಣ ಚೌರ, ರಮೇಶ ಬಿರಾದಾರ, ಉಮೇಶ ಮೆಟಗಾರ, ಅಮಿತ ಬಿರಾದಾರ, ವೀಣಾ ದೇಶಪಾಂಡೆ ಹಾಗೂ ನಾವೀದ ನಾಗಠಾಣ ಉಪಸ್ಥಿತರಿದ್ದರು.




