ಜಲ್ ಜೀವನ್ ಮಿಷನ್ ಹಾಗೂ ಟಾಸ್ಕ್ ಫೋರ್ಸ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಗದಿತ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಿ, ಬಾಕಿ ಇರುವ ಬಿಲ್‌ಗಳನ್ನು ಶೀಘ್ರವೇ ವಿಭಾಗಿಯ ಕಚೇರಿಗೆ ಸಲ್ಲಿಸುವಂತೆ ಜಿಪಂ ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಯೋಜನೆಗಳು ಹಾಗೂ ಘಟಕಾಂಶಗಳ ಕುರಿತು ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.
“ಜೂನ್ 17ರಿಂದ 30ರವರೆಗೆ ಜಿಲ್ಲೆಯಾದ್ಯಂತ ಹರ ಘರ್ ಜಲ್ ಅಭಿಯಾನವನ್ನು ಅನುಷ್ಠಾನಗೊಳಿಸಿ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ವಿವಿಧ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿಗಳನ್ನು ಹಂಚಿಕೆ ಮಾಡಿ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು” ಎಂದರು.
“ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ದಿನಗಳಲ್ಲಿ ಮಳೆಯ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಅತ್ಯವಶ್ಯಕ ಪರಿಸ್ಥಿತಿಯಲ್ಲಿ ಮಾತ್ರ ಹೊಸ ಕೊಳವೆಬಾವಿ ಕೊರೆಸಬೇಕು. ಜಿಲ್ಲೆಗೆ ಹೆಚ್ಚಿನ ಅನುದಾನ ದೊರೆಯಲು ಹರ್ ಘರ್ ಜಲ್ ಯೋಜನೆ ಪ್ರಗತಿ ಅತ್ಯಂತ ಮಹತ್ವದಾಗಿದ್ದು, ಪ್ರತಿವಾರ ಕನಿಷ್ಠ 20 ಗ್ರಾಮಗಳಲ್ಲಿ ವರದಿಕರಣ ಹಾಗೂ ಪ್ರಮಾಣೀಕರಣ ಕಾರ್ಯ ಪೂರ್ಣಗೊಳಿಸುವಂತೆ ಸಹಾಯಕ ಮತ್ತು ಕಿರಿಯ ಇಂಜಿನಿಯರುಗಳಿಗೆ ಗುರಿ ನಿಗದಿಪಡಿಸಬೇಕು” ಎಂದು ತಾಕೀತು ಮಾಡಿದರು.
“ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮದಿಂದ ಎರಡು ಮನೆಗಳ ನಲ್ಲಿ ಸಂಪರ್ಕಗಳ ನೀರಿನ ಮಾದರಿಗಳನ್ನು ಹಾಗೂ ಶಾಲೆ, ಅಂಗನವಾಡಿ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ನೀರಿನ ಮಾದರಿಗಳನ್ನು ಪ್ರತಿ ತಿಂಗಳು ಪರೀಕ್ಷಿಸಬೇಕು” ಎಂದು ಆದೇಶಿಸಿದ್ದಾರೆ.
ಜೊತೆಗೆ, “ಇಲಾಖೆಯ ಪ್ರಯೋಗಾಲಯಗಳಲ್ಲಿ ಮೇಲ್ಮೈ ನೀರಿನ ಮಾದರಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಅಂತರ್ಜಲ ಮಾದರಿಗಳನ್ನು ವರ್ಷಕ್ಕೆ ಎರಡು ಬಾರಿ ಕಡ್ಡಾಯವಾಗಿ ಪರೀಕ್ಷಿಸಬೇಕು” ಎಂದು ಪ್ರಯೋಗಾಲಯ ಸಿಬ್ಬಂದಿಗೆ ಸೂಚನೆ ನೀಡಿದರು.




