ಟೌನ್‌ಶಿಪ್ ನೆಪದಲ್ಲಿ ಬಿಡದಿ ಮತ್ತು ಅದರ ಸುತ್ತಮುತ್ತಲಿನ ಹೋಬಳಿಗಳಲ್ಲಿ ಸುಮಾರು 7,481ರಿಂದ 9,600 ಎಕರೆಗಳಷ್ಟು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದು ಆರೋಪಿಸಿ ಜೆಡಿಎಸ್ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದೆ. ಹಾಗೆಯೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದೆ.
ಈ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಸಾವಿರಾರು ರೈತ ಕುಟುಂಬಗಳು ತಮ್ಮ ಜೀವನೋಪಾಯವನ್ನು ಕಳೆದುಕೊಂಡು ಬೀದಿಗೆ ಬೀಳುವ ಆತಂಕ ಎದುರಾಗಿದೆ. ಸರ್ಕಾರದ ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ದಂಧೆಕೋರರ ಹಿತಾಸಕ್ತಿಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಜೆಡಿಎಸ್‌ನ ಆರೋಪಿಸಿದೆ.
ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಭೂಮಿ ಕಸಿದುಕೊಳ್ಳದಂತೆ ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ
ಇನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾನೂನುಬದ್ಧ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ರೈತರ ಒಪ್ಪಿಗೆಯಿಲ್ಲದೆ ಭೂಮಿ ವಶಪಡಿಸಿಕೊಳ್ಳಲು ಸಂಚು ಹೂಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ ದೂರಿನಲ್ಲಿ ಜೆಡಿಎಸ್ ತಿಳಿಸಿದೆ.
ಹಾಗೆಯೇ “ರೈತರ ಒಪ್ಪಿಗೆಯಿಲ್ಲದೆ ಏಕಪಕ್ಷೀಯವಾಗಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಿದರೆ ಜೆಡಿಎಸ್ ಪಕ್ಷವು ರೈತರ ಪರವಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ” ಎಂದು ಎಚ್ಚರಿಸಿದೆ.
“ಬಿಡದಿ ಭಾಗದಲ್ಲಿ ನಡೆಯುತ್ತಿದೆ ಎನ್ನಲಾದ ಈ ಬೃಹತ್ ಭೂಸ್ವಾಧೀನ ಪ್ರಕ್ರಿಯೆಯ ಹಿಂದಿನ ನೈಜ ಉದ್ದೇಶ ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ರೈತರ ಹಿತರಕ್ಷಣೆಗಾಗಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಪ್ರಾಥಮಿಕ ಭೂಸ್ವಾಧೀನ ಪ್ರಕ್ರಿಯೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು” ಎಂದು ಜೆಡಿಎಸ್ ಆಗ್ರಹಿಸಿದೆ.





