ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನ ದೈನಂದಿನ ಭಾಗವಾಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಕರೆ ನೀಡಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ನಗರದ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
“ಯೋಗವು ಜಗತ್ತಿಗೆ ನಮ್ಮ ದೇಶ ನೀಡಿರುವ ಅತ್ಯಂತ ಹೆಮ್ಮೆಯ ಕೊಡುಗೆಯಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಎದುರಾಗುತ್ತಿರುವ ಒತ್ತಡ, ಆತಂಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಯೋಗ ಸಂಜೀವಿನಿಯಾಗಿದೆ. ಮನಸ್ಸು ಮತ್ತು ದೇಹದ ಸದೃಢತೆಗೆ ಯೋಗವು ಬಹು ಮುಖ್ಯವಾಗಿದ್ದು, ಪ್ರತಿನಿತ್ಯ ನಿಯಮಿತವಾಗಿ ಯೋಗಾಭ್ಯಾಸ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿರೋಗಿ ಹಾಗೂ ಸುಂದರ ಜೀವನ ನಡೆಸಲು ಸಾಧ್ಯ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಯೋಗಾಸಕ್ತರಿಗೆ ಶ್ರೀಮತಿ ಸುನೀತಾ ಬಿರಾದಾರ, ಜ್ಯೋತಿ, ಸಂಜಯ ಹಾಗೂ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ಸುಮಾರು 45 ನಿಮಿಷಗಳ ಕಾಲ ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮದ ಸಾಮೂಹಿಕ ಯೋಗಾಭ್ಯಾಸ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನಡೆಸಿಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಸಿದ್ರಾಮಪ್ಪ ಕರಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ವಿದ್ಯಾವತಿ ಅಥಣಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್ ಥೈವಾಡಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಆಯುಷ್ ಇಲಾಖೆಯ ಆರ್.ಎಸ್ ಪಾಟೀಲ, ಎನ್ ಸಿಸಿ ಕೆಡೆಟ್‌ಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.




