ಈ ದಿನ ಸಂಪಾದಕೀಯ | ಟ್ರಂಪ್‌ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!

Date:

ದ್ವೇಷ, ಜನಾಂಗೀಯ ಧ್ರುವೀಕರಣ, ಆಕ್ರಮಣಕಾರಿ ರಾಷ್ಟ್ರೀಯತೆ, ಯುದ್ಧೋನ್ಮಾದ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳ ರಾಜಕಾರಣವನ್ನು ಮುಂದಿಟ್ಟುಕೊಂಡು ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದ್ದರು ಡೊನಾಲ್ಡ್ ಟ್ರಂಪ್‌. ಅವರಿಗೆ ಅಮೆರಿಕದ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಲ್ಲಿಯೇ ಸೋಲುಣಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇಷ್ಟವಿಲ್ಲದ ಪದ ‘ಸೋಲು’. ತಾನು ಸೋಲುವುದಿಲ್ಲ, ತನ್ನ ನಿರ್ಧಾರಗಳೇ ಅಂತಿಮ, ತನ್ನನ್ನು ವಿರೋಧಿಸುವವರು ದೇಶದ ಹಿತಶತ್ರುಗಳೆಂದು ಆಕ್ರಮಣಕಾರಿಯಾಗಿ ದೂರುವುದು ಅವರ ಧೋರಣೆ. ಅಮೆರಿಕದ ಅಧಿಕಾರವನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಯ ವಿಸ್ತರಣೆಯೆಂದು ಭಾವಿಸಿರುವ ಟ್ರಂಪ್‌ಗೆ ಈಗ ಅದೇ ದೇಶದ ಮತದಾರರು ದೊಡ್ಡ ಪೆಟ್ಟು ಕೊಟ್ಟಿದ್ದಾರೆ.

- Advertisement -

2026ರ ನವೆಂಬರ್ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಹೀನಾಯ ಸೋಲುಂಡಿದೆ. ಡೆಮಾಕ್ರಟಿಕ್ ಪಕ್ಷ ಸಂಸತ್ತಿನ ಎರಡೂ ಸದನಗಳ ನಿಯಂತ್ರಣವನ್ನು ತನ್ನದಾಗಿಸಿಕೊಂಡಿದೆ. ದಶಕಗಳಿಂದ ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಾಗಿದ್ದ ರಾಜ್ಯಗಳಲ್ಲಿಯೂ ಮತದಾರರು ಟ್ರಂಪ್‌ ವಿರುದ್ಧ ಮತಚಲಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ...

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ ಸಮಸ್ಯೆ ಇಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳುವುದು,...

ಇದು ಕೇವಲ ಅಮೆರಿಕದ ಎರಡು ರಾಜಕೀಯ ಪಕ್ಷಗಳ ನಡುವಿನ ಅಧಿಕಾರ ಬದಲಾವಣೆಯಲ್ಲ. ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಹೆಚ್ಚಾದ ಆರ್ಥಿಕ ಅನಿಶ್ಚಿತತೆ, ದುಬಾರಿ ಜೀವನ, ವಲಸಿಗರ ವಿರುದ್ಧದ ಕಠಿಣ ನೀತಿಗಳು, ಜನಾಂಗೀಯ ಧ್ರುವೀಕರಣ ಹಾಗೂ ಇರಾನ್ ಯುದ್ಧದಂತಹ ನಿರ್ಧಾರಗಳ ವಿರುದ್ಧ ವ್ಯಕ್ತವಾದ ಅಸಮಾಧಾನದ ರಾಜಕೀಯ ಪರಿಣಾಮವಿದು.

ಈ ಚುನಾವಣೆಯನ್ನು ಸ್ವತಃ ಟ್ರಂಪ್ ತಮ್ಮ ನಾಯಕತ್ವದ ಜನಮತಗಣನೆ ಎಂದು ಹೇಳಿಕೊಂಡಿದ್ದರು. ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ ನೀಡುವಾಗ ತಾನೇ ಸ್ಪರ್ಧಿಸುತ್ತಿರುವುದಾಗಿ ಭಾವಿಸಿ ಮತ ಚಲಾಯಿಸುವಂತೆ ಕರೆ ನೀಡಿದ್ದರು. ಮತದಾರರು ಅವರ ಕರೆಯನ್ನು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ಆದರೆ, ಟ್ರಂಪ್ ವಿರುದ್ಧವೇ ಮತಚಲಾಯಿಸಿದ್ದಾರೆ.

ಟೆಕ್ಸಾಸ್‌ನಲ್ಲಿ ಸುಮಾರು ನಾಲ್ಕು ದಶಕಗಳ ನಂತರ ಡೆಮಾಕ್ರಟಿಕ್ ಪಕ್ಷ ಸೆನೆಟ್ ಸ್ಥಾನ ಮತ್ತು ರಾಜ್ಯಪಾಲರ ಹುದ್ದೆಯನ್ನು ಗೆದ್ದಿದೆ. ಕನ್ಸಾಸ್‌ನಲ್ಲಿ 1932ರ ನಂತರ ಮೊದಲ ಬಾರಿಗೆ ಡೆಮಾಕ್ರಟಿಕ್ ಅಭ್ಯರ್ಥಿ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಮೇನ್ ರಾಜ್ಯದಲ್ಲಿ ಮೂರು ದಶಕಗಳಿಂದ ಡೆಮಾಕ್ರಟಿಕ್ ಪಕ್ಷಕ್ಕೆ ಸವಾಲಾಗಿದ್ದ ರಿಪಬ್ಲಿಕನ್ ಸೆನೆಟರ್ ಸುಸಾನ್ ಕಾಲಿನ್ಸ್ ಸೋತಿದ್ದಾರೆ. ಅಯೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ರಿಪಬ್ಲಿಕನ್ ಪ್ರಾಬಲ್ಯಕ್ಕೆ ಹೊಡೆತ ಬಿದ್ದಿದೆ.

ಇವೆಲ್ಲ ಆಕಸ್ಮಿಕ ಸೋಲುಗಳಲ್ಲ. ಟ್ರಂಪ್ ರಾಜಕಾರಣದ ವಿರುದ್ಧ ವಿವಿಧ ಜನ ವರ್ಗಗಳ ಮತದಾರರಲ್ಲಿ ಬೆಳೆಯುತ್ತಿರುವ ಅಸಮಾಧಾನದ ಸಂಕೇತಗಳು. ಈ ಸೋಲಿನ ಮಹತ್ವದ ಅಂಶ ಅಮೆರಿಕದ ಸಾಮಾನ್ಯ ಜನರ ಬದುಕಿನಲ್ಲಿದೆ.

ಅಂದಹಾಗೆ, ಅಮೆರಿಕದ ಆರ್ಥಿಕತೆ ಬೆಳೆಯುತ್ತಿದೆ, ಷೇರು ಮಾರುಕಟ್ಟೆ ದಾಖಲೆಗಳನ್ನು ಮುರಿಯುತ್ತಿದೆ, ಅಮೆರಿಕ ಮತ್ತೆ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗುತ್ತಿದೆ ಎಂಬ ಘೋಷಣೆಗಳನ್ನು ಟ್ರಂಪ್ ಆಡಳಿತ ನಿರಂತರವಾಗಿ ಮಾಡುತ್ತಿತ್ತು. ಆದರೆ, ಸಾಮಾನ್ಯ ಅಮೆರಿಕನ್ನರ ಅಡುಗೆಮನೆಯ ಲೆಕ್ಕಾಚಾರ ಅದಕ್ಕೆ ತತ್ವಿರುದ್ಧವಾಗಿತ್ತು. ಆಹಾರ, ಮನೆಬಾಡಿಗೆ, ಇಂಧನ, ಆರೋಗ್ಯ ಸೇವೆ, ಸಾಲದ ಕಂತುಗಳ ಹೊರೆ ಜನರ ಬದುಕನ್ನು ಹೈರಾಣಾಗಿಸಿತ್ತು.

ಹಣದುಬ್ಬರವನ್ನು ನಿಯಂತ್ರಿಸುವುದಾಗಿ ಅಧಿಕಾರಕ್ಕೆ ಬಂದ ಟ್ರಂಪ್, ಆಮದು ಸುಂಕಗಳ ಮೂಲಕ ವ್ಯಾಪಾರಯುದ್ಧ ಆರಂಭಿಸಿದರು. ಇರಾನ್ ವಿರುದ್ಧದ ಯುದ್ಧಕ್ಕೆ ಮುಂದಾದರು. ಅದರ ಪರಿಣಾಮವಾಗಿ ಇಂಧನ ಬೆಲೆಗಳು ಹೆಚ್ಚಾದವು. ಸಾಗಣೆ ವೆಚ್ಚ ಏರಿತು. ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಒತ್ತಡಕ್ಕೆ ಸಿಲುಕಿದವು.

ಆದರೆ, ಇದೆಲ್ಲವನ್ನೂ ಬದಿಗಿಟ್ಟಿದ್ದ ಟ್ರಂಪ್, ಷೇರು ಮಾರುಕಟ್ಟೆಯ ಬೆಳವಣಿಗೆಯೇ ಆರ್ಥಿಕ ಸಮೃದ್ಧಿಯ ಮಾನದಂಡವೆಂದು ಭಾವಿಸಿದ್ದರು. ಇದು ಟ್ರಂಪ್ ಅವರ ದೊಡ್ಡ ವೈಫಲ್ಯ. ಈಗ, ‘ದೇಶದ ಷೇರು ಮಾರುಕಟ್ಟೆ ಎಷ್ಟೇ ಎತ್ತರಕ್ಕೆ ಏರಿದರೂ ಜನರ ಅಡುಗೆಮನೆಯ ಖರ್ಚು ಕಡಿಮೆಯಾಗುವುದಿಲ್ಲ. ರಾಷ್ಟ್ರೀಯತೆಯ ಘೋಷಣೆಗಳಿಂದ ಹಸಿವು ನೀಗುವುದಿಲ್ಲ. ಬಲಿಷ್ಠ ನಾಯಕನ ಭಾಷಣಗಳಿಂದ ನಿರುದ್ಯೋಗಿಯ ಕೈಗೆ ಕೆಲಸ ಸಿಗುವುದಿಲ್ಲ’ ಎಂಬ ಪಾಠವನ್ನು ಅಮೆರಿಕನ್ನರು ಟ್ರಂಪ್‌ಗೆ ಕಲಿಸಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ, 2024ರಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದ ಯುವ ಮತದಾರರು ಎರಡು ವರ್ಷಗಳಲ್ಲಿಯೇ ಅವರಿಂದ ದೂರ ಸರಿದಿದ್ದಾರೆ. ಚುನಾವಣೋತ್ತರ ಅಧ್ಯಯನಗಳ ಪ್ರಕಾರ, 18ರಿಂದ 29 ವರ್ಷ ವಯಸ್ಸಿನ ಮತದಾರರಲ್ಲಿ ಸುಮಾರು ಮೂರನೇ ಎರಡರಷ್ಟು ಮಂದಿ ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಉದ್ಯೋಗದ ಭವಿಷ್ಯ, ಶಿಕ್ಷಣದ ಸಾಲ, ವಸತಿ ವೆಚ್ಚ, ಆರ್ಥಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಭದ್ರತೆಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಯುವಜನರು ಮತ ಚಲಾಯಿಸಿದ್ದಾರೆ.

ಅಂತೆಯೇ, ಹಿಸ್ಪಾನಿಕ್, ಏಷ್ಯನ್, ಭಾರತೀಯ ಹಾಗೂ ಕಪ್ಪು ವರ್ಣೀಯ ಮತದಾರರು ಟ್ರಂಪ್ ವಿರುದ್ಧ ದನಿ ಎತ್ತಿದ್ದಾರೆ. ಟ್ರಂಪ್ ಅವರ ವೀಸಾ ನೀತಿಗಳು, ಉದ್ಯೋಗದಲ್ಲಿನ ಅನಿಶ್ಚಿತತೆ ಹಾಗೂ ಜನಾಂಗೀಯ ಭಾವನೆ ಕೆರಳಿಸುವ ಧೋರಣೆಗಳ ವಿರುದ್ಧ ವಿದೇಶಿ ಅಮೆರಿಕನ್ನರು ಮತ ದಾಖಲಿಸಿದ್ದಾರೆ.

ಇರಾನ್ ವಿರುದ್ಧದ ಅಮೆರಿಕ ಘೋಷಿಸಿದ ಯುದ್ಧವೂ ಅಮೆರಿಕನ್ನರಿಗೆ ಆರ್ಥಿಕ ಸಂಕಷ್ಟ ಸೃಷ್ಟಿಸಿದೆ. ಯುದ್ಧದ ಪರಿಣಾಮವಾಗಿ, ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಯುದ್ಧಕ್ಕಾಗಿ ವೆಚ್ಚವಾಗುವ ಶತಕೋಟಿ ಡಾಲರ್‌ಗಳು ಸಾರ್ವಜನಿಕ ಶಿಕ್ಷಣ, ಆರೋಗ್ಯ, ವಸತಿ ಹಾಗೂ ಸಾಮಾಜಿಕ ಭದ್ರತೆಯ ಅಗತ್ಯಗಳೊಂದಿಗೆ ನೇರ ಸಂಬಂಧ ಹೊಂದಿವೆ. ಟ್ರಂಪ್ ಅವರ ಈ ಏಕಪಕ್ಷೀಯ ವಿದೇಶಾಂಗ ನೀತಿಯ ವಿರುದ್ಧವೂ ಅಮೆರಿಕನ್ನರು ಜನಾದೇಶ ನೀಡಿದ್ದಾರೆ. ಟ್ರಂಪ್ ಅವರ ಸೊಕ್ಕು ಅಡಗಿಸಿದ್ದಾರೆ.

ಅಮೆರಿಕದ ಜನಾದೇಶವು ಭಾರತಕ್ಕೂ ಅಷ್ಟೇ ಪ್ರಸ್ತುತ. ಭಾರತದಲ್ಲಿ ಮೋದಿ ಸರ್ಕಾರವು ರಾಷ್ಟ್ರೀಯತೆ, ಸಾಂಸ್ಕೃತಿಕ ಅಸ್ಮಿತೆ, ಬಲಿಷ್ಠ ನಾಯಕತ್ವದ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದೇ ಸಮಯದಲ್ಲಿ ದೇಶದ ಜನಸಾಮಾನ್ಯರು ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ದುಬಾರಿ ಶಿಕ್ಷಣ, ಆರೋಗ್ಯ ವೆಚ್ಚ ಹಾಗೂ ಆದಾಯದ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ.

ಜಿಡಿಪಿಯ ಬೆಳವಣಿಗೆ, ಷೇರು ಮಾರುಕಟ್ಟೆಯ ಸಾಧನೆ, ಬೃಹತ್ ಕಾರ್ಪೊರೇಟ್ ಹೂಡಿಕೆ ಹಾಗೂ ಜಾಗತಿಕ ಆರ್ಥಿಕ ಶಕ್ತಿ ಎಂಬ ದೂರದ ಬೆಟ್ಟವನ್ನು ಮೋದಿ ತೋರುತ್ತಿದ್ದಾರೆ. ಆದರೆ, ಜನಸಾಮಾನ್ಯರು ದೇಶದ ಅಭಿವೃದ್ಧಿಯ ಫಲ ಯಾರಿಗೆ ತಲುಪುತ್ತಿದೆ, ಕಾರ್ಮಿಕರ ನೈಜ ವೇತನ ಎಷ್ಟು ಹೆಚ್ಚಾಗಿದೆ, ಯುವಜನರಿಗೆ ಅವರ ಅರ್ಹತೆಗೆ ತಕ್ಕ ಉದ್ಯೋಗ ದೊರೆಯುತ್ತಿದೆಯೇ, ರೈತರ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಆದಾಯ ಹೆಚ್ಚುತ್ತಿದೆಯೇ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಸಾಮಾನ್ಯ ಕುಟುಂಬಗಳ ಕೈಗೆಟುಕುತ್ತಿವೆಯೇ ಎಂಬುದನ್ನು ನೋಡುತ್ತಿದ್ದಾರೆ.

ಆದರೆ, ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ– ‘ಇಲ್ಲ’. ಆದ್ದರಿಂದ, ಅಭಿವೃದ್ಧಿಯ ಬಗ್ಗೆ ಮೋದಿ ಸರ್ಕಾರ ಎಷ್ಟೇ ಪ್ರಚಾರ ನಡೆಸಿದರೂ, ಜನರು ತಮ್ಮ ಬದುಕಿನ ವಾಸ್ತವದ ಮೇಲೆಯೇ ಮತಚಲಾಯಿಸುತ್ತಾರೆ.

ಈ ಲೇಖನ ಓದಿದ್ದೀರಾ?: ದಮನಕ್ಕೆ ಮಣಿಯದೆ ಪ್ರಜಾಪ್ರಭುತ್ವದ ಹಕ್ಕು ಗೆದ್ದ ಜಾಮಿಯಾ ಯುವಶಕ್ತಿ!

ಆದ್ದರಿಂದ, ಅಮೆರಿಕದ ಜನಾದೇಶವು ಆಡಳಿತದ ಆರ್ಥಿಕ ನೀತಿಗಳು, ಸಾರ್ವಜನಿಕ ಉತ್ತರದಾಯಿತ್ವ ಹಾಗೂ ಜನರ ಜೀವನಮಟ್ಟಕ್ಕೆ ಚುನಾವಣೆಯಲ್ಲಿ ದೊರೆಯುವ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ. ಇತಿಹಾಸದಲ್ಲಿ ಯಾವ ನಾಯಕನೂ ಶಾಶ್ವತವಲ್ಲ. ಯಾವ ರಾಜಕೀಯ ಪಕ್ಷದ ಪ್ರಾಬಲ್ಯವೂ ಅಜೇಯವಲ್ಲ. ಯಾವ ಭದ್ರಕೋಟೆಯೂ ಎಂದೆಂದಿಗೂ ಭದ್ರವಾಗಿರುವುದಿಲ್ಲ. ಜನರ ಬದುಕಿನ ಪ್ರಶ್ನೆಗಳನ್ನು ನಿರ್ಲಕ್ಷಿಸುವ ರಾಜಕಾರಣಕ್ಕೆ ಭವಿಷ್ಯವೂ ಇಲ್ಲ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದೆ.

ಆದಾಗ್ಯೂ ಟ್ರಂಪ್ ವಿರುದ್ಧದ ಅಸಮಾಧಾನವನ್ನು ತನ್ನ ಚುನಾವಣಾ ಲಾಭವನ್ನಾಗಿ ಮಾಡಿಕೊಂಡಿರುವ ಡೆಮಾಕ್ರಟಿಕ್ ಪಕ್ಷವು ಈಗ ಜನರ ಆರ್ಥಿಕ ಸಂಕಷ್ಟಗಳಿಗೆ ಕಾರ್ಯಸಾಧ್ಯವಾದ ಪರ್ಯಾಯಗಳನ್ನು ಮುಂದಿಡಬೇಕಿದೆ. ಯುದ್ಧ, ಕಾರ್ಪೊರೇಟ್ ಪ್ರಾಬಲ್ಯ, ಸಾಮಾಜಿಕ ಅಸಮಾನತೆ ಹಾಗೂ ವಲಸಿಗರ ಹಕ್ಕುಗಳ ವಿಚಾರದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಿದೆ.

ಅದೇನೇ ಇರಲಿ, ಟ್ರಂಪ್ ಅವರ ರಾಜಕೀಯ ಅಹಂಕಾರಕ್ಕೆ ಅಮೆರಿಕ ಮತದಾರರು ದೊಡ್ಡ ಪೆಟ್ಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ದೊಡ್ಡವರು ನಾಯಕನಲ್ಲ; ಜನತೆ ಎಂಬುದನ್ನು ಸಾಬೀತು ಮಾಡಿದ್ದಾರೆ!

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲಿಗಢ ಮುಸ್ಲಿಂ ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ನಶ್ರಾ ನಯೀಮ್; 40 ವರ್ಷಗಳ ಬಳಿಕ ಒಲಿದ ಉಪಾಧ್ಯಕ್ಷ ಸ್ಥಾನ

ಉತ್ತರ ಪ್ರದೇಶದ ಪ್ರತಿಷ್ಠಿತ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ವಿದ್ಯಾರ್ಥಿ ಸಂಘದ...

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್ ಅಗೆದು ಕೊಟ್ಟ ‘ಮ್ಯಾಜಿಕ್ ಸಂಜೀವಿನಿ’

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ...

ಅಪರಾಧ ಹಿನ್ನೆಲೆ ಜಾಮೀನು ನೀಡಲು ಸಕಾರಾತ್ಮಕ ಅಂಶವಲ್ಲ: ಸುಪ್ರೀಂ ಕೋರ್ಟ್

ಆರೋಪಿಯೋರ್ವನ ಅಪರಾಧ ಹಿನ್ನೆಲೆಯನ್ನು ಆತನಿಗೆ ಜಾಮೀನು ನೀಡಲು ಯಾವುದೇ ಕಾರಣಕ್ಕೂ 'ಸಕಾರಾತ್ಮಕ'...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ ಕಳ್ಳಾಟ ಬಯಲು!

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು...